ದರ್ಶನ್ ವಿರುದ್ಧ ಕೋಟೆ ನಾಡಲ್ಲಿ ಆಕ್ರೋಶದ ಮಾರ್ದನಿ

| Published : Jun 13 2024, 12:47 AM IST

ದರ್ಶನ್ ವಿರುದ್ಧ ಕೋಟೆ ನಾಡಲ್ಲಿ ಆಕ್ರೋಶದ ಮಾರ್ದನಿ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು

ಕನ್ನಡಪ್ರಭ ವಾರ್ತೆ, ಚಿತ್ರದುರ್ಗರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ವಿರುದ್ಧ ಬುಧವಾರ ಚಿತ್ರದುರ್ಗದಲ್ಲಿ ಆಕ್ರೋಶಗಳು ಮೊಳಗಿದವು.

ವೀರಶೈವ ಸಮಾಜ, ಕರವೇ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುವುದರ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೌನ ಆಚರಿಸಿದರು.

ಪ್ರತಿಭಟನಾಕಾರರು ಕೊಲೆಗಡುಕ ದರ್ಶನ್, ಖಳನಾಯಕ ದರ್ಶನ್ ಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಯತ್ತ ತೆರಳಿದರು.

ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕ್ಷುಲ್ಲಕ ಕಾರಣಕ್ಕಾಗಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಜ್ಞಾತ ಪ್ರದೇಶಕ್ಕೆ ಕರೆದೊಯ್ದು ದಿನವಿಡೀ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿದೆ. ಒಂದು ವೇಳೆ ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಪೊಲೀಸ್‌ ವಶಕ್ಕೆ ನೀಡಬಹುದಿತ್ತು. ಬದಲಾಗಿ ಪ್ರಾಣ ತೆಗೆದಿರುವುದು ಇದು ಅತ್ಯಂತ ಖಂಡನೀಯ ಎಂದರು.

ಸ್ಟಾರ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಪೊಲೀಸರು, ಗೃಹ ಮಂತ್ರಿಗಳು ದರ್ಶನ್ ನನ್ನು ಉಳಿಸುವ ಪ್ರಯತ್ನ ‌ಮಾಡಿದರೆ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ. ದರ್ಶನ್ ಅಭಿಮಾನಿ ಸಂಘವ ವಿಸರ್ಜನೆ ಮಾಡಿ ಮೃತ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದರ್ಶನ ಗೆಳತಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದನೆಂಬ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದು ಕ್ರೂರವಾಗಿ ಹಿಂಸೆ ನೀಡಿ ಕೊಲೆ ಮಾಡಿರುವುದನ್ನು ನೋಡಿದರೆ ಎಂತಹವರಿಗೂ ಮನ ಕರಗುತ್ತದೆ. ಒಂದು ವೇಳೆ ಪವಿತ್ರಗೌಡ ಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬಹುದಿತ್ತು. ಇಲ್ಲವೇ ಅವನ ಕುಟುಂಬದ ಹಿರಿಯರ ಗಮನಕ್ಕೆ ತರಬಹುದಿತ್ತು. ಇದ್ಯಾವುದನ್ನು ಮಾಡದೆ ಕೊಲೆ ಮಾಡಿರುವುದು ದುಃಖಕರ ಸಂಗತಿ ಎಂದರು.

ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ತನಿಖೆ ನಡೆಸೋಣ ಎಂದು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ದರ್ಶನ್ ಮತ್ತವರ ಗ್ಯಾಂಗ್‍ಗೆ ಗಲ್ಲು ಶಿಕ್ಷೆಯಾಗಬೇಕು. ದರ್ಶನ್ ಸಿನಿಮಾಗಳಲ್ಲಿ ಮಾತ್ರ ಆದರ್ಶ ವ್ಯಕ್ತಿ.‌ ಆದರೆ,‌ ನಿಜ ಜೀವನದಲ್ಲಿ‌ ಭಿನ್ನವಾದ ವ್ಯಕ್ತಿ ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಚಿತ್ರದುರ್ಗದ ಎಲ್ಲ ಸಮುದಾಯದ ಜನತೆ ಸೇರಿ ಪ್ರತಿಭಟನೆ ನಡೆಸುತ್ತಿರುವುದು ಮಾನವೀಯತೆಗೆ ಹಿಡಿದ ಕನ್ನಡಿ. ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿ ತಪ್ಪು ಮಾಡಿದ್ದರೆ ಆತನಿಗೆ ತಿಳಿ ಹೇಳಿ ಸರಿದಾರಿಗೆ ತರಬಹುದಿತ್ತು. ದರ್ಶನ್ ಅಭಿಮಾನಿಗಳಿಗೆ ಇಂದು ಅವರ ವಿಕೃತಿ ಗೊತ್ತಾಗಿದೆ. ಅವರ ಮೇಲಿನ ಅಂಧಾಭಿಮಾನ ಬಿಟ್ಟು ಪ್ರತಿಭಟಿಸಿ ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದರು.

ದರ್ಶನ್ ಕಾಂಗ್ರೆಸ್ ಪಕ್ಷದ ಪ್ರಚಾರಕ, ಅವರ ಬಳಿ ಹಣ ಇದೆ, ಜನ ಇದ್ದಾರೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಬಿಡಬಾರದು. ಪೊಲೀಸರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ತಪ್ಪಿತಸ್ಥ ಸೆಲೆಬ್ರೆಟಿ ಆಗಿದ್ದರೂ ತಪ್ಪಿಸಿಕೊಳ್ಳಲು ಬಿಡಬಾರದು ಎಂದರು.ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ರಮೇಶ್, ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ ಉಮೇಶ್, ಗುರು, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಪಟೇಲ್ ಶಿವಕುಮಾರ್, ಶ್ರೀ ಬಸವನಾಗೀದೇವ ಸ್ವಾಮೀಜಿ, ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ಕೆಇಬಿ ಷಣ್ಮುಖಪ್ಪ, ರೈತ ಸಂಘದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಹಡಿ ಶಿವಮೂರ್ತಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದ್, ಜೆಡಿಎಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತ, ಮರುಳಾರಾಧ್ಯ, ರೇಣುಕಾರಾಧ್ಯ, ಭಜರಂಗದಳದ ಪ್ರಭಂಜನ್, ರುದ್ರೇಶ್, ಸಿದ್ದೇಶ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.