ರೈತರಿಗೆ ಪರಿಹಾರ ವಿತರಿಸಲು ಸೂಚನೆ

| Published : Jan 25 2024, 02:02 AM IST

ರೈತರಿಗೆ ಪರಿಹಾರ ವಿತರಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

49 ಎಕರೆ 32 ಗುಂಟೆ ಭೂ ಸ್ವಾಧೀನಕ್ಕೆ ಪಡೆದು ರೈತರಿಗೆ ಪೇಮೆಂಟ್ ಆಗಿರುವ ಕುರಿತು ದಾಖಲೆ ಇಲ್ಲ. ಫೆ.28 ರಂದು ಮತ್ತೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗುವುದು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ ನೀರಾವರಿ ನಿಗಮದಿಂದ ಮಾಸ್ತಿಹೊಳಿ ಗ್ರಾಮದ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧಿಸಿದಂತೆ ಪರಿಹಾರ ವಿತರಿಸದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಒಂದು ವೇಳೆ ಪರಿಹಾರ ನೀಡಿದಲ್ಲಿ ಅದರ ದಾಖಲೆಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸ್ತಿಹೊಳಿ ಗ್ರಾಮದ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಮಾಸ್ತಿಹೊಳಿ ಗ್ರಾಮದಲ್ಲಿನ ಜಮೀನುಗಳ ಮಾಲೀಕರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಇನ್ನೂ ಕೆಲವು ರೈತರಿಗೆ ಪರಿಹಾರ ವಿತರಿಸಿಲ್ಲ ಎಂದು ಕೆಲವರು ಮನವಿಗಳನ್ನು ನೀಡುತ್ತಿದ್ದಾರೆ‌. ಆದರೆ, ನಿಗಮದಿಂದ ಪರಿಹಾರ ವಿತರಣೆ ಮಾಡಲಾಗಿದೆ ಎಂದು ವರದಿ ಸಲ್ಲಿಸಲಾಗಿದೆ. ಇದನ್ನು ರೈತರು ಒಪ್ಪುತ್ತಿಲ್ಲ. ಪೇಮೆಂಟ್ ಆಗಿರುವ ಕುರಿತು ನಿಗಮದಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದರು.

49 ಎಕರೆ 32 ಗುಂಟೆ ಭೂ ಸ್ವಾಧೀನಕ್ಕೆ ಪಡೆದು ರೈತರಿಗೆ ಪೇಮೆಂಟ್ ಆಗಿರುವ ಕುರಿತು ದಾಖಲೆ ಇಲ್ಲ. ಫೆ.28 ರಂದು ಮತ್ತೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗುವುದು. ಅಷ್ಟರೊಳಗೆ ಚೆಕ್ ನಂಬರ್‌, ಸ್ವೀಕೃತಿ ಪ್ರತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

116 ಸರ್ವೆ ನಂಬರ್‌ ಮೊದಲು ಅರಣ್ಯ ಇಲಾಖೆಯ ಜಾಗೆಯಾಗಿದ್ದು, ಹಿಡಕಲ್ ಜಲಾಶಗಳಲ್ಲಿ ಮುಳುಗಡೆ ಜಮೀನು ಹೊಂದಿದ ರೈತರಿಗೆ ಉಳುಮೆ ಮಾಡಲು ನೀಡಲಾಗಿದೆ. ನೀರಾವರಿ ನಿಗಮದಿಂದ 2009 ರಲ್ಲಿ ಸಮೀಕ್ಷೆ ನಡೆಸಿ, ರೈತರಿಗೆ ಜಮೀನು ನೀಡಲಾಗಿದೆ. ಅದರಲ್ಲಿ ಇನ್ನೂ 12 ಜನರಿಗೆ ಜಮೀನು ನೀಡಬೇಕಾಗಿದೆ ಎಂದು ರೈತರು ಮನವಿ ಮಾಡಿದರು.

ನೀರಾವರಿ ನಿಗಮದಲ್ಲಿ ಯಾವುದೇ ಸರಿಯಾದ ದಾಖಲೆಗಳಿಲ್ಲ. ರೈತರಿಗೆ ಪರಿಹಾರ ಕೂಡ ವಿತರಿಸಿಲ್ಲ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಬಾಳೇಶ್ ಅವರು ಸಭೆಯಲ್ಲಿ ತಿಳಿಸಿದರು.

ಜಲಾಶಯದ ನೀರು ಬರಲ್ಲ ಎಂದು ವರದಿ ನೀಡಿದ ಜಮೀನುಗಳಿಗೆ ಕೂಡ ನೀರು ನುಗ್ಗುತ್ತಿದೆ. ರೈತರ ಉಳುಮೆಗೆ ನೀಡಲಾದ ಜಮೀನಿನಲ್ಲಿ ಪೂರ್ಣ ನೀರಿನ ಪ್ರಮಾಣ ಇದೆ ಅದನ್ನು ಪರಿಶೀಲನೆ ನಡೆಸಬೇಕು. ನಿಗಮದಿಂದ ಪರಿಹಾರ ನೀಡಿದ ಕುರಿತು ದಾಖಲೆಗಳಿಲ್ಲ ಹಾಗಾಗಿ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಅಥವಾ ಅಗತ್ಯ ದಾಖಲೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ, ಭೂದಾಖಲೆಗಳ ಇಲಾಖೆಯ ಜಂಟಿ‌ ನಿರ್ದೇಶಕಿ ನಜ್ಮಾ ಪೀರಜಾದೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಇಂಜಿನಿಯರ್, ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ರೈತ ಮುಖಂಡರು ಸಭೆಯಲ್ಲಿ ಇದ್ದರು.