ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ಹರಳಹಳ್ಳಿ ಗ್ರಾಮದ ಬಳಿ ಹೇಮಾವತಿ ಎಡದಂಡೆ ನಾಲೆಗೆ ಕಾರು ಬಿದ್ದಿರುವ ದುರ್ಘಟನೆ ನಡೆದಿದ್ದು, ಕೊಂತಗೋಡನಹಳ್ಳಿ ಗ್ರಾಮದ ಪ್ರೇಮ್ ಕುಮಾರ್(೩೮) ಎಂಬಾತ ಕಾಣೆಯಾಗಿರುವ ಪ್ರಕರಣಕ್ಕೂ, ಈ ದುರ್ಘಟನೆಗೂ ಸಂಬಂಧವಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಹಳೇಕೋಟೆ ಹೋಬಳಿಯ ಹರಳಹಳ್ಳಿ ಗ್ರಾಮದ ಸಮೀಪದ ಹೇಮಾವತಿ ಎಡದಂಡೆ ನಾಲೆಗೆ ಆಗಸ್ಟ್ ೨೩ರ ಶನಿವಾರ ರಾತ್ರಿ ಕಾರು ಬಿದ್ದಿರುವುದನ್ನು ಸ್ಥಳೀಯರು ಭಾನುವಾರ ಮುಂಜಾನೆ ಗಮನಿಸಿ, ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗ್ನಿಶಾಮಕರ ಸಹಾಯದಿಂದ ಕಾರನ್ನು ಹೊರತೆಗೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಯಾವುದೇ ಮೃತದೇಹವಿರಲಿಲ್ಲ. ಕೊಂತಗೋಡನಹಳ್ಳಿ ಗ್ರಾಮದ ಪ್ರೇಮಕುಮಾರ್ ಅವರಿಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ ಮತ್ತು ಈ ಕಾರು ನಾಲೆಗೆ ಬಿದ್ದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಂತಿಗ್ರಾಮ ಹೋಬಳಿಯ ಕೊಂತಗೋಡನಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬುವರು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಅವರ ಪುತ್ರ ಪ್ರೇಮಕುಮಾರ್ ಆಗಸ್ಟ್ ೧೭ರ ಭಾನುವಾರ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈಗ ಕಾರು ನಾಲೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಪ್ರೇಮಕುಮಾರ್ ನಾಪತ್ತೆ ಹಾಗೂ ಈ ದುರ್ಘಟನೆಗೆ ಸಂಬಂಧಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಮೃತದೇಹಕ್ಕಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ನಾಲೆ ಸಾಗಿರುವ ಪ್ರದೇಶದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.