ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಮಂಜು ಭೇಟಿ, ಪರಿಶೀಲನೆ

| Published : Dec 30 2023, 01:15 AM IST

ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಮಂಜು ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆ ಶಾಸಕ ಎಚ್.ಟಿ.ಮಂಜು ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.

ಕ್ರೀಡಾಂಗಣದ ಕಳಪೆ ನಿರ್ವಹಣೆಗೆ ಬೇಸತ್ತ ಸಾರ್ವಜನಿಕರಿಂದ ವ್ಯಾಪಕ ದೂರು । ಕ್ರೀಡಾಂಗಣ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆ ಶಾಸಕ ಎಚ್.ಟಿ.ಮಂಜು ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.

ತಾಲೂಕು ಕ್ರೀಡಾಂಗಣದೊಳಗೆ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿದ್ದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳೆರಡರ ಬಗ್ಗೆಯೂ ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು.

ಈ ಹಿನ್ನೆಲೆ ಶಾಸಕರು ಭೇಟಿ ನೀಡಿದಾಗ ಸುಮಾರು 2 ಕೋಟಿ ರು. ವೆಚ್ಚದಲ್ಲಿ ಜಿಮ್ ಉಪಕರಣಗಳನ್ನು ಅಳವಡಿಸಲಾಗಿದೆ. ಉಪಕರಣಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಗುತ್ತಿಗೆದಾರರು ಹಣ ಪಡೆದು ಸಮರ್ಪಕ ಕೆಲಸ ಮಾಡಿಲ್ಲ ಎಂದು ದೂರಿದರು.

ಕ್ರೀಡಾಂಗಣಕ್ಕೆ ಹುಲ್ಲುಹಾಸಿನ ಅಳವಡಿಕೆ ಮತ್ತು ನಿರ್ವಹಣೆಗಾಗಿ 1 ಕೋಟಿ ರು. ವೆಚ್ಚವಾಗಿದೆ. ಕ್ರೀಡಾಂಗಣದ ಪ್ರಾರಂಭದ 4 ರಿಂದ 5 ತಿಂಗಳು ಮಾತ್ರ ಹುಲ್ಲುಹಾಸಿನ ನಿರ್ವಹಣೆ ಮಾಡಲಾಗಿದೆ. ನಂತರ ಅದರ ನಿರ್ವಹಣೆ ಇಲ್ಲದೆ ಒಣಗುತ್ತಿದೆ. ಇಡೀ ಕ್ರೀಡಾಂಗಣ ಕಗ್ಗತ್ತಲಿನಲ್ಲಿದೆ. ವಾಯುವಿಹಾರಿಗಳು ಮತ್ತು ಹಿರಿಯ ನಾಗರಿಕರು ಕತ್ತಲಿನಲ್ಲಿ ವಾಕಿಂಗ್ ಮಾಡಬೇಕಿದೆ ಎಂದು ಆರೋಪಿಸಿದರು.

ಕ್ರೀಡಾಂಗಣದಲ್ಲಿ ಸಾಕಷ್ಟು ಮುಳ್ಳಿನ ಗಿಡಗಳಿದ್ದು, ಅವುಗಳನ್ನು ಕೀಳುವ ಗೋಜಿಗೂ ಹೋಗಿಲ್ಲ. ಕ್ರೀಡಾಂಗಣಕ್ಕೆ ಮಕ್ಕಳು, ಮಹಿಳೆಯರು, ಯುವಕರು ಮುಂಜಾನೆಯೇ ಆಗಮಿಸುತ್ತಾರೆ. ಅವರಿಗೆ ಶುಚಿಯಾದ ಶೌಚಾಲಯವಿಲ್ಲ. ದುರಸ್ಥಿಗೊಳಿಸುವ ಗೋಜಿಗೂ ಹೋಗಿಲ್ಲ ಎಂದು ಸಾರ್ವಜನಿಕರು ಶಾಸಕರು ಮತ್ತು ಅಧಿಕಾರಿಗಳಿಗೆ ದೂರುಗಳ ಸುರಿಮಳೆಗೈದರು.

ದೂರುಗಳನ್ನು ಆಲಿಸಿದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ನಿರ್ಮಿಸಬೇಕಾದ ಒಳಾಂಗಣ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣದೊಳಗೆ ತಂದು ಹಾಕಿದ್ದೇ ಮೊದಲ ತಪ್ಪು. ಹಾಕಿದ ಮೇಲೆ ಯುವಜನ ಸಬಲೀಕರಣ ಇಲಾಖೆ ಕ್ರೀಡಾಂಗಣದ ನಿರ್ವಹಣೆಯನ್ನು ಮಾಡಬೇಕಾದುದು ಅವರ ಕರ್ತವ್ಯ ಎಂದರು.

ಕ್ರೀಡಾಂಗಣದಲ್ಲಿ ರಾತ್ರಿ ಕಾವಲುಗಾರರು ಇಲ್ಲ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ನೀವು ಸುಮ್ಮನಿರುವುದು ನಿಮಗೆ ಶೋಭೆ ತರುವುದಿಲ್ಲ. ಕ್ರೀಡಾಂಗಣವನ್ನು ಸಾರ್ವಜನಿಕ ಸೇವೆಗೆ ನೀಡಿದ ನಂತರವೂ ನೀವು ಸಬೂಬು ಹೇಳುವುದು ತರವಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ನಿಮ್ಮ ಇಲಾಖೆಗೆ ಕ್ರೀಡಾಂಗಣವನ್ನು ಹಸ್ತಾಂತರಿಸಿಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಓಂಪ್ರಕಾಶ್ ಅವರಿಗೆ ಖಡಕ್ ಸೂಚನೆ ನೀಡಿದರು.

ಇದೇ ವೇಳೆ ಮುಂದಿನ ಒಂದುವರೆ ತಿಂಗಳಲ್ಲಿ ಕ್ರೀಡಾಂಗಣದಿಂದ ಯಾವುದೇ ದೂರುಗಳು ಬಾರದಂತೆ ನಿರ್ವಹಣೆ ಮಾಡಲು ಪ್ರಯತ್ನಿಸುವುದಾಗಿ ಉಪ ನಿರ್ದೇಶಕ ಓಂಪ್ರಕಾಶ್ ತಿಳಿಸಿದರು.

ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿನಾಗೇಶ್, ತಾಪಂ ಮಾಜಿ ಸದಸ್ಯ ಮೋಹನ್, ರಕ್ಷಾ ಸಮಿತಿ ಸದಸ್ಯ ರವಿಕುಮಾರ್, ಮಹದೇವೇಗೌಡ, ಶಾಸಕರ ಆಪ್ತಸಹಾಯಕ ಪ್ರತಾಪ್ ಸೇರಿದಂತೆ ಹಲವರಿದ್ದರು.

-------

29ಕೆಎಂಎನ್ ಡಿ26

ಕೆ.ಆರ್ .ಪೇಟೆ ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.