ಹೈಟೆಕ್ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನ

| Published : Jan 28 2024, 01:16 AM IST

ಸಾರಾಂಶ

ಅಥಣಿ ಪಟ್ಟಣದ ಹಳೆಯ ತಹಸೀಲ್ದಾರ್‌ ಕಾರ್ಯಾಲಯದ 26 ಗುಂಟೆ ಸ್ಥಳದಲ್ಲಿ ₹45 ಕೋಟಿ ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಎರಡು ನೂರು ಹಾಸಿಗೆ ಸೌಲಭ್ಯವುಳ್ಳ ಹೈಟಿಕ್ ಹೆರಿಗೆ ಆಸ್ಪತ್ರೆ ನಿರ್ಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಅಥಣಿ

ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಎಲ್ಲ ರೀತಿಯ ಆರೋಗ್ಯ ಸೇವೆಗಳು ಉಚಿತ ದೊರಕಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲೂಕಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದರ ಜೊತೆಗೆ ಪಟ್ಟಣದಲ್ಲಿ ಒಂದು ಹೈಟೆಕ್ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸುವ ಮೂಲಕ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.

ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜನಹಿತ ಆಯ್ಕೆಯ ಸೆಂಟರ್ ಬೆಂಗಳೂರು ಮತ್ತು ಸಿಂಧೂಪುರ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ಬೃಹತ್ ನೇತ್ರ ಚಿಕಿತ್ಸಾ ಶಿಬಿರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಾಲಯ, 12 ಹಾಸಿಗೆ ಸೌಲಭ್ಯವುಳ್ಳ ಐಸಿಯು ಘಟಕ, 6 ಕೆ. ಎಲ್. ಸಾಮರ್ಥ್ಯದ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತನಾಡಿದರು.

ಬೆಳಗಾವಿ ಜಿಲ್ಲೆಯಲ್ಲೇ ಅಥಣಿ ಸಾರ್ವಜನಿಕ ಆಸ್ಪತ್ರೆ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಸಂಶಣಾ ಪ್ರಮಾಣ ಪತ್ರ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆ. ತಾಲೂಕ ಆರೋಗ್ಯ ಅಧಿಕಾರಿ ಡಾ.ಬಸಗೌಡ ಕಾಗೆ ಅವರ ನೇತೃತ್ವದಲ್ಲಿ ಅವರ ಎಲ್ಲ ವೈದ್ಯಕೀಯ ತಂಡದವರು ರೋಗಿಗಳಿಗೆ ಉತ್ತಮ ಸೇವೆ ಒದಗಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಥಣಿ ಮತಕ್ಷೇತ್ರದ ಐಗಳಿ, ಕೋಕಟನೂರು ಮತ್ತು ತೆಲಸಂಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ ಕೊಟ್ಟಲಗಿ, ರೆಡ್ಡಿರಹಟ್ಟಿ ಗ್ರಾಮಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಮಂಜೂರು ಮಾಡಲಾಗುವುದು. ಶೀಘ್ರದಲ್ಲಿಯೇ ಅಥಣಿ ಪಟ್ಟಣದ ಹಳೆಯ ತಹಸೀಲ್ದಾರ್‌ ಕಾರ್ಯಾಲಯದ 26 ಗುಂಟೆ ಸ್ಥಳದಲ್ಲಿ ₹45 ಕೋಟಿ ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಎರಡು ನೂರು ಹಾಸಿಗೆ ಸೌಲಭ್ಯವುಳ್ಳ ಹೈಟಿಕ್ ಹೆರಿಗೆ ಆಸ್ಪತ್ರೆ ನಿರ್ಮಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಈ ಆಸ್ಪತ್ರೆ ಸ್ಥಾಪನೆಗೆ ಅನುದಾನಕ್ಕೆ ಅನುಮೋದನೆ ಪಡೆಯಲಾಗುವುದು ಎಂದರು.

ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮಹೇಶ್ ಕೋಣೆ, ಚಿಕ್ಕೋಡಿ ಆಫರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಶರಣಪ್ಪ ಗಡೆದ, ಅಥಣಿ ತಹಶೀಲ್ದಾರ ವಾಣಿ ಯು, ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ,

ಅಭಿಯಂತರ ವೀರಣ್ಣ ವಾಲಿ, ಸಿಪಿಐ ರವೀಂದ್ರ ರಾಯ್ಕೋಡಿ, ರಾಜ್ಯ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ.ಡಾ.ಕೃಷ್ಣ ಮೋಹನ್ ಜಿಂಕಾ, ಡಾ. ಹರಿಪ್ರಸಾದ್, ಎಚ್ ಅರುಣ ಕುಮಾರ, ಡಾ. ರಮೇಶ ಹುಲಕುಂದ, ರಾಜ್ ಕಿಶೋರ, ಡಾ.ಸಿ.ಎಸ್ ಪಾಟೀಲ, ಡಾ. ಸಂಜುಕುಮಾರ ಗುಂಜಿಗಾವಿ, ಡಾ. ಹನುಮಂತ ಕಲಮಡಿ, ಡಾ. ಅರುಣ ಯಾದಗಿರಿ, ಡಾ. ವಿಜಯ ಕರೆಣ್ಣವರ, ಡಾ. ಚಿದಾನಂದ ಮೇತ್ರಿ ಸೇರಿ ಇನ್ನಿತರರು ಇದ್ದರು. ಡಾ.ಬಸಗೌಡ ಕಾಗೆ ಸ್ವಾಗತಿಸಿದರು, ವಿ.ಪಿ ಮಾಳಿ ನಿರೂಪಿಸಿದರು. ಎ.ಬಿ. ಗುಳಿಧರ ವಂದಿಸಿದರು. ಕೋಟ್..ನಮ್ಮ ಆಹಾರ ಪದ್ಧತಿ, ಕಲುಷಿತ ಕೃಷಿ ಪದ್ಧತಿಯಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಸೇವೆಗಳು ಸಿಗಲಿ ಎಂಬ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ, ಆದರೆ ಅಲ್ಲಿ ವೈದ್ಯರ ಕೊರತೆ, ಮೂಲ ಸೌಕರ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸಿಬ್ಬಂದಿ ನೇಮಿಸಬೇಕು. ರಾಜು ಕಾಗೆ. ಕಾಗವಾಡ ಶಾಸಕ ಆಹಾರ ಪದ್ಧತಿ, ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಪದ್ಧತಿಯಿಂದ ಶುಗರ್, ಬಿಪಿ ಕಾಯಿಲೆ ಸಾಮಾನ್ಯವಾಗಿವೆ. ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳಬೇಕು. ವೈದ್ಯರು ಕೂಡ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುವ ಮೂಲಕ ಆಸ್ಪತ್ರೆಗೆ ಒಳ್ಳೆಯ ಹೆಸರು ತರಬೇಕು. ಆಸ್ಪತ್ರೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಲಕ್ಷ್ಮಣ ಸವದಿ. ಅಥಣಿ ಶಾಸಕ