ಸಾರಾಂಶ
ಕೃಷಿ ಇಲಾಖೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಎ.ಮಂಜು ತಾಲೂಕಿನಲ್ಲಿ 47 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿಭೂಮಿ ಇದ್ದು, 45 ಸಾವಿರ ಮಂದಿ ರೈತರು ಇದ್ದಾರೆ. ಈ ಪೈಕಿ ಶೇ.50ರಷ್ಟು ಮಂದಿ ರೈತರು ಬೆಳೆ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ 47 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿಭೂಮಿ ಇದ್ದು, 45 ಸಾವಿರ ಮಂದಿ ರೈತರು ಇದ್ದಾರೆ. ಈ ಪೈಕಿ ಶೇ.50ರಷ್ಟು ಮಂದಿ ರೈತರು ಬೆಳೆ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕೃಷಿ ಇಲಾಖೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕಿನಲ್ಲಿ ಹೆಚ್ಚು ಮಂದಿ ರೈತರು ಬೆಳೆ ವಿಮೆ ಕಂತು ಪಾವತಿಸಿ ಅಂದಾಜು 700 ಕೋಟಿಗೂ ಅಧಿಕ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ, ನಮ್ಮ ತಾಲೂಕಿನಲ್ಲಿ ಕೇವಲ 700 ಮಂದಿ ರೈತರು ವಿಮೆ ಮಾಡಿಸಿಕೊಂಡು ಅತೀ ಕಡಿಮೆ ವಿಮೆ ಹಣವನ್ನು ಪಡೆದುಕೊಂಡು ವಂಚನೆಗೊಂಡಿದ್ದಾರೆ. ಇದಕ್ಕೆ ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯ ಮನೋಭಾವನೆ ಕಾರಣವಾಗಿದೆ ಎಂದು ಎಚ್ಚರಿಸಿದರು.
ಇನ್ನೂ ಮುಂದೆ ಇಲಾಖೆ ವತಿಯಿಂದ ನೀಡುವ ಕೃಷಿ ಪರಿಕರಗಳು, ಬೀಜ, ಗೊಬ್ಬರ ಇತರೆ ಸವಲತ್ತುಗಳನ್ನು ನೀಡುವ ವೇಳೆಯೇ ವಿಮೆ ಕಂತು ಪಾವತಿಗೆ ಕ್ರಮ ಕೈಗೊಳ್ಳಬೇಕು. ಮೆಕ್ಕೆಜೋಳ, ಭತ್ತ, ರಾಗಿ ಇತರೆ ಬೆಳೆಗಳಿಗೆ ವಿಮೆ ಕಂತು ಪಾವತಿಗೆ ದಿನಾಂಕ ನಿಗದಿಯಾಗಿದೆ. ಬರುವ ಆ.20ರಂದು ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗುವುದು ಎಂದರು.