ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆಯಿಂದ ಮೃತಪಟ್ಟ ಕೋಗೋಡು ಗ್ರಾಮದ ಮಹಿಳೆ ಸುಶೀಲಮ್ಮ ಕುಟುಂಬಕ್ಕೆ ಶಾಸಕ ಎಚ್. ಕೆ. ಸುರೇಶ್ ನಡುರಾತ್ರಿ ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವಾರದ ಹಿಂದೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಲಾಗಿತ್ತು. ಆದರೆ ವಾರ ಕಳೆಯುವುದರೊಳಗೆ ಮತ್ತೊಮ್ಮೆ ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದು ದುರಂತವಾಗಿದೆ. ಈ ಹಿಂದೆ ಅರಣ್ಯ ಇಲಾಖೆಯ ವಿರುದ್ಧ ಧ್ವನಿ ಎತ್ತಿದಾಗ ನಮ್ಮ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದರು. ಆದರೆ ಈಗ ಅವರ ಪಕ್ಷದ ಸಂಸದರೇ ಇಂದು ನೇರವಾಗಿ ಅರಣ್ಯ ಇಲಾಖೆ ತಪ್ಪು ಅವರ ಬೇಜವಾಬ್ದಾರಿತನದ ಬಗ್ಗೆ ಧ್ವನಿ ಎತ್ತಿದ್ದಾರೆ. ಇದಕ್ಕೂ ಮೊದಲು ಅರಣ್ಯ ಇಲಾಖೆಯವರ ನಿರ್ಲಕ್ಷ್ಯದ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ನಾನು. ಈಗಾಗಲೇ ಸರ್ಕಾರಕ್ಕೆ ಆನೆ ಕಾರಿಡಾರ್ ಹಾಗೂ ಆನೆಧಾಮ ಮಾಡಲು ಒಂದು ಸಾವಿರ ಕೋಟಿ ನಿಗದಿ ಪಡಿಸಲು ಮನವಿ ಮಾಡಿದ್ದೆವು. ಆದರೆ ಅವರು ಕೇವಲ ೨೦ ಕೋಟಿ ಮಾತ್ರ ಮೀಸಲಿಟ್ಟಿದ್ದು ಇದರಿಂದ ಯಾವುದೇ ಶಾಶ್ವತ ಪರಿಹಾರ ಸಿಗುವುದಿಲ್ಲ. ಅದು ಕೇವಲ ಸರ್ವೆ ನಡೆಸಲು ಮಾತ್ರ ಸಾಧ್ಯವಾಗುತ್ತದೆ ಎಂದು ಕಿಡಿಕಾರಿದ ಅವರು, ಈಗಾಗಲೇ ಸಂಸದರು ನಾಳಿಯಿಂದ ಕಾಡಾನೆಗಳನ್ನು ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ. ಕೇವಲ ರೈತರ ಕಣ್ಣೊರೆಸಲು ಬರೀ ಆಶ್ವಾಸನೆ ನೀಡುವುದು ಬೇಡ ಅದು ಕಾರ್ಯರೂಪಕ್ಕೆ ಬರಲಿ ಎಂದರು.
ಇದು ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳಿಗೆ ಕಟ್ಟಕಡೆಯ ಎಚ್ಚರಿಕೆ. ಇನ್ನು ಮುಂದೆ ಕ್ಷೇತ್ರದಲ್ಲಿ ಒಂದೇ ಒಂದು ಆನೆಯ ದಾಳಿಗೆ ಸಾವನ್ನಪ್ಪಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳೆ ಹೊಣೆಯಾಗುತ್ತಾರೆ. ಅಂದು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾರೂ ಸಹ ಭಯಪಡದೆ ನಗುಮುಖದಿಂದ ಇರಿ ಎಂದು ಸೂತಕದ ಮನೆಯಲ್ಲಿ ಸಂಸದರು ಹೇಳುವುದು ಎಷ್ಟು ಸರಿ. ನಾಲ್ಕು ಪುಂಡಾನೆಗಳನ್ನು ಹಿಡಿದರೆ ಸಾಲದು ಇಲ್ಲಿರುವ ೭ಕ್ಕೂ ಹೆಚ್ಚು ಪುಂಡಾನೆಗಳನ್ನು ಹಿಡಿಯಬೇಕು ಉಳಿದ ಕಾಡಾನೆಗಳನ್ನು ಭದ್ರಾ ಅರಣ್ಯಕ್ಕೆ ಕಳಿಸುವ ಕೆಲಸ ಮಾಡಬೇಕು ಎಂದರು.ಇನ್ನು ಈ ಭಾಗದಲ್ಲಿ ಆಗುತ್ತಿರುವ ಸಾವುನೋವುಗಳಿಗೆ ಸರ್ಕಾರ ೧೫ ಲಕ್ಷ ರು. ಪರಿಹಾರ ಕೊಟ್ಟು ಕೈ ತೊಳೆದು ಕೊಳ್ಳದೆ ೨೫ ಲಕ್ಷ ನೀಡಿ ನೆರವಾಗಬೇಕು ಎಂದು ಆಗ್ರಹಿಸಿದರು.