‘ಮೋದಿ ಮತ್ತೊಮ್ಮೆ’: ಬದ್ಧತೆಗೆ ರಘು ಕಸರತ್ತು

| Published : Feb 11 2024, 01:54 AM IST

ಸಾರಾಂಶ

ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಘುಚಂದನ್ ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕೆಲಸಗಳ ಆಟೋ ಮೂಲಕ ಪ್ರಚುರ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರದಲ್ಲಿ ಮುಂದುವರೆವ ಅಪೂರ್ವ ಕ್ಷಣಗಳಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿರುವ ಭಾರತೀಯ ಜನತಾಪಕ್ಷದ ಆಶಯಗಳಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಘು ಚಂದನ್ ದನಿಗೂಡಿಸಿದ್ದು ಶನಿವಾರ ಚಿತ್ರದುರ್ಗದಲ್ಲಿ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಸಾವಿರ ಆಟೋಗಳಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಕೆಲಸಕ್ಕೆ ಮುಂದಾಗಿರುವ ರಘು ಚಂದನ್ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಆಟೋಗೆ ಸ್ಟಿಕ್ಕರ್ ಹಚ್ಚುವುದರ ಮೂಲಕ ಚಾಲನೆ ನೀಡಿದರು. ಪಾವಗಡ, ಸಿರಾ, ಹಿರಿಯೂರು, ಮೊಳಕಾಲ್ಮುರು ಸೇರಿದಂತೆ ಎಲ್ಲ ಎಂಟು ಕ್ಷೇತ್ರಗಳಲ್ಲಿ ಆಟೋ ಮೇಲೆ ಕೇಂದ್ರ ಸರ್ಕಾರದ ಸಾಧನೆಗಳ ಪ್ರಚುರ ಪಡಿಸಲಾಗುತ್ತದೆ ಎಂದರು.

ಇದಕ್ಕೂ ಮೊದಲುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ಚಂದನ್, ನರೇಂದ್ರ ಮೋದಿ ಅವರದು ವಿಶ್ವ ನಾಯಕತ್ವದ ಗುಣ ಎಂಬುದು ಈಗಾಗಲೇ ಸಾಬೀತಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳು ಮೋದಿಯವರ ಮೆಚ್ಚಿಕೊಂಡಿದ್ದಾರೆ. ಅವರ ಅಭಿವೃದ್ದಿ ಕಾರ್ಯಗಳು ಭಾರತವ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಹಾಗಾಗಿ ಮೋದಿ ಮತ್ತೆ ಏಕೆ ಪ್ರಧಾನಿಯಾಗಬೇಕೆಂಬುದಕ್ಕೆ ಆಂದೋಲನದ ಸ್ವರೂಪ ನೀಡಲಾಗಿದೆ. ಜನಪ್ರಿಯ ಕಾರ್ಯಕ್ರಮಗಳ ಆಟೋ ರೆಕ್ಜಿನ್ ಮೇಲೆ ಪ್ರಿಂಟ್ ಮಾಡಿ ಪ್ರಚಾರ ಮಾಡಲಾಗುತ್ತದೆ. ಇಡೀ ಭಾರತದಲ್ಲಿಯೇ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು.

ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ 150 ಆಟೋಗಳಿಗೆ ಚಾಲನೆ ನೀಡಲಾಗಿದೆ. ಲೋಕಸಭಾ ವ್ಯಾಪ್ತಿಯಲ್ಲಿ ಆಯಾ ತಾಲೂಕಿನಲ್ಲಿ ಆಟೋಗಳ ಸಂಖ್ಯೆ ಆಧಾರಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತದೆ. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುತ್ತಿದೆ. ಆಟೋ ಚಾಲಕರೇ ಸ್ವಯಂ ಪ್ರೇರಿತರಾಗಿ ಮೋದಿ ಅವರ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ವಿಚಾರದಲ್ಲಿ ನಾವೇನು ಅವರ ಬಲವಂತ ಮಾಡುತ್ತಿಲ್ಲ. ಅವರ ಆಸೆಗೆ ಅನುಗುಣಾಗಿ ಸ್ಪಂದಿಸಿದ್ದೇವೆ ಎಂದರು. ಹಿಂದೊಮ್ಮೆ ವಾಜಪೇಯಿ ಅವರು ಪ್ರಧಾನಿಯಾಗಿ ಉತ್ತಮ ಕಾರ್ಯ ಮಾಡಿದರೂ ಸೂಕ್ತ ಪ್ರಚಾರದ ಕೊರತೆಯಿಂದಾಗಿ ಸೋಲು ಕಾಣಬೇಕಾಯಿತು. ಕೇಂದ್ರ ಸರ್ಕಾರದ ಯೋಜನೆಗಳ ಜನ ಸಾಮಾನ್ಯರಿಗೆ ತಲುಪಿಸಿದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಯಾವುದೇ ಸಮಸ್ಯೆಯಿಲ್ಲ. ಮೋದಿಯವರು ಮಾಡಿದ ಕೆಲಸಗಳ ಪ್ರತಿ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು. ದೇಶಕ್ಕೆ ಬಿಜೆಪಿ ಕೊಡುಗೆ ಏನು ಎಂಬುದ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ರಘು ಚಂದನ್ ಹೇಳಿದರು.

ಚಿತ್ರದುರ್ಗ ಬಿಜೆಪಿಯಲ್ಲಿ ಸಣ್ಣ ಪುಟ್ಟ ಅಸಮಧಾನಗಳು ಇರುವುದು ಸಹಜ.ಅವೆಲ್ಲ ಬಗೆಹರಿಯು್ತ್ತವೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ನಮ್ಮದು ವಸುಧೈವ ಕುಟುಂಬಕಂ ವ್ಯವಸ್ಥೆ. ಮನೆ ಯಜಮಾನರು ಎಲ್ಲವನ್ನು ಬಗೆಹರಿಸುತ್ತಾರೆಂದು ರಘು ಚಂದನ್ ಹೇಳಿದರು.ಮುಖಂಡರಾದ ಅನಿತ್‍ಕುಮಾರ್, ರತ್ನಮ್ಮ , ಲೋಕನಾಥ್, ಮಲ್ಲಿಕಾರ್ಜುನ್, ವಕ್ತಾರ ನಾಗರಾಜ್ ಬೇದ್ರೆ, ತಿಪ್ಪೇಸ್ವಾಮಿ, ಚಂದ್ರಕಲಾ, ವೆಂಕಟೇಶ್ ಯಾದವ್, ನಗರಸಭಾ ಸದಸ್ಯರಾದ ದೀಪು ಉಪಸ್ಥಿತರಿದ್ದರು.

ಸ್ಪರ್ಧೆಗೆ ನಾನೂ ಉತ್ಸುಕ: ರಘು

ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಾನೂ ಕೂಡ ಉತ್ಸುಕನಾಗಿದ್ದೇನೆ. ಟಿಕೆಟ್ ಕೊಡುವಂತೆ ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದೇನೆ. ಯಾರಿಗೆ ಟಿಕೆಟ್ ಕೊಟ್ಟರೂ ಮೋದಿ ಗೆಲುವಿಗೆ ಶ್ರಮಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ ಎರಡು ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ. ಎಂದು ರಘು ಚಂದನ್ ಹೇಳಿದರು.