ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಸರ್ಕಾರದಲ್ಲಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್‌ವರೆಗಿನ ಎಲ್ಲ ಪ್ರಧಾನಿಗಳು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮನಮೋಹನ್ ಸಿಂಗ್ ಅವರು ರೈತರ ಸಾಲ ಮನ್ನಾ ಮಾಡಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿ ರೈತರ ಹಿತ ಬಲಿ ಕೊಟ್ಟರು ಎಂದು ಸಚಿವ ಆರ್.ಬಿ ತಿಮ್ಮಾಪೂರ ಟೀಕಿಸಿದರು.ಇಲ್ಲಿನ ಚರಂತಿಮಠ ಕಲ್ಯಾಣಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರಲಿಲ್ಲ. ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಚುನಾವಣಾ ಬಾಂಡ್ ಹಗರಣ ವಿಶ್ವದಲ್ಲೇ ಅತಿ ದೊಡ್ಡದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೇ ಹೇಳಿದ್ದಾರೆ. ನರೇಂದ್ರ ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ವಾಗ್ದಾಳಿ ಮಾಡಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ತರಬೇಕು. ಇಲ್ಲವಾದರೆ ಈಗಾಗಲೇ ಬಿಜೆಪಿ ಮುಖಂಡರು ಹೇಳಿದಂತೆ ಸಂವಿಧಾನ ತಿದ್ದುಪಡಿಗೆ ಕೈ ಹಾಕಲಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೂ ಉಳಿಗಾಲವಿಲ್ಲ. ಆದ್ದರಿಂದ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಗೆಲುವಿಗೆ ಶ್ರಮಿಸಿ ಎಂದು ಕರೆ ನೀಡಿದರು.ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಹಸಿವು ಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆ ದೊಡ್ಡದು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಪ್ರಶ್ನೆ ಮಾಡುವ ಮೋದಿ, ದೇಶದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಬಾಗಲಕೋಟೆ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ಪಿ.ಸಿ ಗದ್ದಿಗೌಡರು ಒಳ್ಳೆಯವರು. ಆದರೆ, ಸತತ 20 ವರ್ಷ ಸಂಸತ್ತಿಗೆ ಆಯ್ಕೆಯಾಗಿರುವ ಅವರು ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.ಅಜಯಕುಮಾರ ಸರನಾಯಕ ಮಾತನಾಡಿ, ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಸಂಯುಕ್ತ ಪಾಟೀಲ ಹೆಸರನ್ನು ಘೋಷಣೆ ನಂತರ ಅನೇಕರು ನನಗೆ ಕರೆ ಮಾಡಿ ಸಭೆ ಕರೆಯಲು ಸಲಹೆ ಮಾಡಿದರು. ಪಕ್ಷದ ತೀರ್ಮಾನವೇ ಅಂತಿಮ. ಹೀಗಾಗಿ ನಾನು ಸಭೆ ಕರೆಯಲು ಹೋಗಲಿಲ್ಲ. ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸುವುದು ಈಗ ನಮ್ಮ ಮುಂದೆ ಇರುವ ಗುರಿ ಎಂದು ಹೇಳಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ನೀರಾವರಿ ಯೋಜನೆಗಳ ಅನುಷ್ಠಾನವೇ ನಮ್ಮ ಮೊದಲ ಆದ್ಯತೆ. ಕೃಷ್ಣಾ ನೀರಿನ ನಮ್ಮ ಹಕ್ಕನ್ನು ಪಡೆಯಲು ಸುಪ್ರೀಂ ಕೋರ್ಟಿನಲ್ಲಿರುವ ಪ್ರಕರಣ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು. ಸಂಸತ್ತಿಗೆ ಆಯ್ಕೆಯಾಗಿ ಹೋದ ನಂತರ ಮಾಡಬೇಕಾದ ಮೊದಲ ಕೆಲಸವೇ ಇದು ಎಂದು ವೇದಿಕೆಯಲ್ಲಿದ್ದ ಪುತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಸೂಚಿಸಿದರು.ರಾಜಕಾರಣ ನಿಂತ ನೀರಲ್ಲ. ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿ ಬದಲಾವಣೆಯ ಗಾಳಿ ಕಾಣಿಸುತ್ತಿದೆ. ಎರಡೂ ಕಡೆ ಕಾಂಗ್ರೆಸ್ ಜಯ ನಿಶ್ಚಿತ. ಅವಳಿ ಜಿಲ್ಲೆಗಳು ಕೇಂದ್ರದ ಯೋಜನೆಗಳಿಂದ ವಂಚಿತವಾಗಿವೆ. ರೈಲ್ವೆ ಯೋಜನೆಗಳು ಆಮೆ ವೇಗದಲ್ಲಿವೆ. ನೀರಾವರಿ ಸಮಸ್ಯೆ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ನಿರ್ಲಕ್ಷಿಸಲಾಗಿದೆ. ಎಂದು ಟೀಕಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿ, ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದರೆ ನೀವು ನನ್ನ ಮೇಲೆ ಇಟ್ಟಿರುವ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ. ದೇಶ ಸಂಕಷ್ಟದಲ್ಲಿದೆ. ರೈತರು ಸತತ ಎರಡು ಬರಗಾಲಕ್ಕೆ ತುತ್ತಾಗಿದ್ದಾರೆ. ಅನ್ನದಾತನ ಸಂಕಷ್ಟಕ್ಕೆ ನೆರವಾಗಲು ನೆರವು ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೆ ಸ್ಪಂದಿಸಲಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಬೊಕ್ಕಸ ಬರಿದುಮಾಡಿಕೊಂಡಿದ್ದೀರಿ ಎಂದು ಟೀಕೆ ಮಾಡಿದರು. ನಮ್ಮ ಪಾಲಿನ ಹಣ ಕೇಳಿದರೆ ಸಬೂಬು ಹೇಳುತ್ತಲೇ ಬಂದರು ಎಂದು ವಾಗ್ದಾಳಿ ನಡೆಸಿದರು.ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಎಂಎಲ್ಸಿ ಸುನಿಲ್ ಗೌಡ ಪಾಟೀಲ, ಶ್ರೀಮಂತ ಬಸವಪ್ರಭು ಸರನಾಡಗೌಡ, ಸೌದಾಗಾರ್, ನಗರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಸೇರಿ ಹಲವರು ಮಾತನಾಡಿದರು. ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಸಿದ್ದು ಕೊಣ್ಣೂರ, ರವೀಂದ್ರ ಕಲಬುರ್ಗಿ, ಗಿರೀಶ್ ಅಂಕಲಗಿ, ಆರ್.ಎಸ್. ಭಂಡಾರಿ, ಎಸ್.ಎನ್. ರಾಂಪೂರ, ಮುರುಗೇಶ್ ಕಡ್ಲಿಮಟ್ಟಿ, ಚಂದ್ರಶೇಖರ ರಾಠೋಡ್ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.
-------ಕೋಟ್..
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿದ್ಯಾವಂತೆ. ಅವರಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದರೆ ನಿಶ್ಚಿತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ.ಎಚ್.ವೈ. ಮೇಟಿ. ಶಾಸಕ
-ನಾನು ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ಬಿಜೆಪಿ ವಿರುದ್ಧ ಗೆದ್ದೇ ಗೆಲ್ಲುವೆ. ನಾನು ಹುಟ್ಟಿದಾಗ ನಮ್ಮ ತಂದೆ ಗೆಲ್ಲಿಸಿದ್ದೇನೆ. ಈಗಲೂ ಇಲ್ಲಿ ಗುಲಾಲ್ ಎರಚಿ ಹೋಗುತ್ತೇನೆ. ಯೋಗ ಹೇಗೆ ಕೂಡುತ್ತೆ ಅಂದರೆ, ನಾನು ಚಿಕ್ಕವಳಿದ್ದಾಗಲೇ ಪ್ರಧಾನಿ ಆಗ್ತೀನಿ ಅಂತಿದ್ದೇ, ಲಕ್ ಇದ್ದರೆ ಆದ್ರೂ ಆಗಬಹುದು.
ಸಂಯುಕ್ತಾ ಪಾಟೀಲ. ಕಾಂಗ್ರೆಸ್ ಅಭ್ಯರ್ಥಿ---
ಸಂಯುಕ್ತಾ ನಿಮ್ಮಮನೆ ಮಗಳು. ಅವಳ ಗೆಲುವು ನಿಮ್ಮ ಗೆಲುವು. ಅವಳದ್ದು ಯಾವದೇ ಯೋಗ ಇರಬಹುದು. ಆದರೆ, ಪರಿಶ್ರಮ ಇರಬೇಕು. ಕಾಯಕವೇ ಕೈಲಾಸ ಎಂದು ನಂಬಿದವನು ನಾನು. ಸಂಯುಕ್ತಾ ಪರಿಶ್ರಮ ಪಟ್ಟರೆ ಹಿಂದಿನ ಎಲ್ಲ ಸೋಲು ಈಗ ಗೆಲುವು ಆಗುತ್ತೆ. ಈ ಸಾರಿನ ನಿನ್ನ ಗೆಲುವು ನಿನ್ನ ಯೋಗದಿಂದ ಅಲ್ಲ, ಇಲ್ಲಿನ ಮುಖಂಡರಿಂದ ನಿನ್ನ ಗೆಲುವು ಆಗುತ್ತೆ.ಶಿವಾನಂದ ಪಾಟೀಲ. ಜವಳಿ ಸಚಿವ