ಬೇಡಿಕೆ ಈಡೇರಿಸಲು ಎಂಪಿಸಿಎಸ್‌ ಸಿಬ್ಬಂದಿ ಆಗ್ರಹ

| Published : May 18 2024, 12:34 AM IST

ಬೇಡಿಕೆ ಈಡೇರಿಸಲು ಎಂಪಿಸಿಎಸ್‌ ಸಿಬ್ಬಂದಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪಾರದರ್ಶಕ ವ್ಯವಹಾರಕ್ಕಾಗಿ ಅಳವಡಿಸಲುರಪವ ಆನ್‌ಲೈನ್‌ ಸಾಫ್ಟ್‌ವೇರ್‌ ಅನ್ನು ಡೇರಿಗಳಿಗೆ ಅಳವಡಿಸುವುದಕ್ಕಿಂತಲೂ ಮೊದಲು ಒಕ್ಕೂಟದ ಎಲ್ಲ ವಿಭಾಗಗಳಲ್ಲಿ ಅಳವಡಿಸಿ ಪಾರದರ್ಶಕತೆ ತಿಳಿಸುವ ಕೆಲಸ ಮಾಡಲಿ

ಕನ್ನಡಪ್ರಭ ವಾರ್ತೆ ಕೋಲಾರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ-ಚಿಕ್ಕಬಳ್ಳಾಪುರ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಎಂಪಿಸಿಎಸ್ ಸಂಘಗಳಲ್ಲಿ ಆನ್‌ಲೈನ್ ಸಾಫ್ಟ್‌ವೇರ್ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಒಕ್ಕೂಟದಿಂದ ನಿರ್ದೇಶನ ನೀಡಲಾಗಿದೆ. ಆದರೆ, ಸಾಧಕ ಬಾಧಕಗಳ ಬಗ್ಗೆ ಸಂಘಗಳ ಸಿಇಒಗಳ ಬಗ್ಗೆ ಚರ್ಚೆ ನಡೆಸದೆಯೇ ಅಳವಡಿಸಿಕೊಳ್ಳಿ ಎಂದು ಹೇಳಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಡ್ಡಿನಾಂಶ ಶೇ.3.6ಕ್ಕೆ ಸೀಮಿತ

ಸಾಫ್ಟ್‌ವೇರ್‌ನಲ್ಲಿ ಕನಿಷ್ಠ ಜಿಡ್ಡಿನಾಂಶ ೩.೫ ಇದ್ದು, ಇದಕ್ಕೆ ದರ ನಿಗದಿಯಾಗಿರುತ್ತದೆ. ೩.೫ ಕ್ಕಿಂತ ಕಡಿಮೆ ಜಿಡ್ಡಿನಾಂಶ ಬರುವ ಹಾಲಿಗೆ ಯಾವ ದರ ನೀಡಬೇಕು. ತಾವುಗಳು ಒಕ್ಕೂಟದ ಧರ ಪಟ್ಟಿಯಲ್ಲಿ ಕನಿಷ್ಠ ೪.೦ ಜಿಡ್ಡಿನಾಂಶಕ್ಕೆ ಧರಪಟ್ಟಿ ನೀಡಿದ್ದು, ಎಲ್ಲ ಉತ್ಪಾದಕರಿಗೆ ಜಿಡ್ಡಿನಾಂಶದ ಆಧಾರದ ಮೇಲೆ ದರ ನೀಡಲು ಸೂಚಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟವು ತೀರಾ ಕಡಿಮೆಯಾಗಿದ್ದು, ಕೇವಲ ೩.೬ ಜಿಡ್ಡಿನಾಂಶಕ್ಕೆ ಗುಣಮಟ್ಟ ಸೀಮಿತವಾಗಿದೆ ಎಂದರು.ವೇತನ ನಿಗದಿಗೆ ಆಗ್ರಹ

ಎಂಪಿಸಿಸ್ ಕಾರ್ಯದರ್ಶಿಗಳು ೨ ರಿಂದ ೫ ಸಾವಿರ ರು. ವೇತನವನ್ನು ಸೊಸೈಟಿಗಳಿಂದಲೇ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಆನ್‌ಲೈನ್ ಸಾಫ್ಟ್‌ವೇರ್ ಅಳವಡಿಸುವುದೇ ಆದರೆ ಒಕ್ಕೂಟದಿಂದಲೇ ವೇತನ ನಿಗದಿಪಡಿಸಿ ಅಳವಡಿಸಿದರೆ ನಮ್ಮ ಅಭ್ಯಂತರ ಇಲ್ಲ ಎಂದರು. ಅಲ್ಲದೆ ಇದನ್ನು ಸಂಘಗಳಲ್ಲಿ ಅಳವಡಿಸುವುದಕ್ಕಿಂತಲೂ ಮೊದಲು ಒಕ್ಕೂಟದ ಎಲ್ಲ ವಿಭಾಗಗಳನ್ನು ಆನ್‌ಲೈನ್ ಸಾಫ್ಟ್‌ವೇರ್ ವ್ಯವಸ್ಥೆಯಡಿಯಲ್ಲಿ ಅಳವಡಿಸಿ ಪಾರದರ್ಶಕತೆ ತಿಳಿಸುವ ಕೆಲಸ ಮಾಡಿ ಎಂದು ಹೇಳಿದರು.ನಿವೃತ್ತಿ ಧನ ಹೆಚ್ಚಿಸಲಿ

ಇನ್ನು ಸಂಘಗಳ ಸಿಬ್ಬಂದಿ ನಿವೃತ್ತಿಯಾದರೆ ಕೇವಲ ೨ ಲಕ್ಷ ಮಾತ್ರವೇ ನೀಡಲಾಗುತ್ತಿದೆ. ಬೆಂಗಳೂರು, ಚಾಮರಾಜನಗರ ಮತ್ತಿತರ ಕಡೆಗಳಲ್ಲಿ ೫ ರಿಂದ ೮ ಲಕ್ಷರೂಗಳನ್ನು ನೀಡಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಒಕ್ಕೂಟದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು, ನಿಮ್ಮ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಖಜಾಂಚಿ ಮುನಿರಾಜು, ಕೋಲಾರ ತಾಲೂಕು ಅಧ್ಯಕ್ಷ ತೊಂಡಾಲ ಮಂಜು, ಕಾರ್ಯದರ್ಶಿ ತಿಮ್ಮೇಗೌಡ, ಗುಡಿಬಂಡೆ ತಾಲೂಕು ಉಪಾಧ್ಯಕ್ಷ ವಿ.ಅಶೋಕ್‌ಗೌಡ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಚಂದ್ರೇಗೌಡ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಶಿವಾರೆಡ್ಡಿ, ಆಂಜನೇಯಲು, ಮಂಜುನಾಥರೆಡ್ಡಿ, ಗೌರಿಬಿದನೂರು ತಾಲೂಕು ಅಧ್ಯಕ್ಷ ಬಿ.ಆರ್.ವೆಂಕಟೇಶರೆಡ್ಡಿ, ಮತ್ತಿತರರು ಇದ್ದರು.