ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಚನ್ನಕೇಶವ ದೇಗುಲದ ಹಿಂಭಾಗದಲ್ಲಿರುವ ಮೂಡಿಗೆರೆ ರಸ್ತೆಯ ಸಂತೆಮೈದಾನದ ಅವ್ಯವಸ್ಥೆಯ ಬಗ್ಗೆ ಪುರಸಭೆ ಅಧ್ಯಕ್ಷ ಎ.ಆರ್ ಅಶೋಕ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುಂಡಿ ಬಿದ್ದ ಜಾಗವನ್ನು ಸಮತಟ್ಟು ಮಾಡಲು ಸಲಹೆ, ಸೂಚನೆ ನೀಡಿದರು.ಬೇಲೂರು ಚನ್ನಕೇಶವ ದೇಗುಲ ಹಿಂಭಾಗ ವಾರದ ಸಂತೆ ಪ್ರತಿ ಸೋಮವಾರ ನಡೆಯುತ್ತದೆ. ಮಳೆಗಾಲದಲ್ಲಿ ಕೆಸರಿನ ಚಿಂತೆಯಾದರೆ ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಎದುರಾಗುತ್ತದೆ. ಮಳೆ ಬಂದಾಗ ಸಂತೆ ಮೈದಾನದಲ್ಲಿ ಗುಂಡಿ ಬಿದ್ದು ಗ್ರಾಹಕರು ಹಾಗೂ ಸಾರ್ವಜನಿಕರು ಪರದಾಡುವಂತಾಗಿತ್ತು. ಸಂತೆ ಮೈದಾನ ಪಕ್ಕದಲ್ಲಿ ಶಾಲೆಗಳಿದ್ದು ಸೋಮವಾರ ಸಂತೆ ದಿನ ಓಡಾಡಲು ಕಷ್ಟವಾಗಿತ್ತು. ಈ ಕುರಿತು ಈ ಹಿಂದೆ ಇದ್ದ ಪುರಸಭೆ ಅಧ್ಯಕ್ಷರಿಗೆ ಸಹ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು.
ಈಗ ಪುರಸಭೆ ಅಧ್ಯಕ್ಷರಾದ ಎ ಆರ್ ಅಶೋಕ್ ಅವರು ಇಲ್ಲಿಯ ಸಮಸ್ಯೆಗಳನ್ನು ಮನಗಂಡು ಪರಿಸ್ಥಿತಿಯನ್ನು ಅರಿತು ಇಲ್ಲಿರುವ ಅನನುಕೂಲತೆಯನ್ನು ಗಮನಿಸಿ ಸಂತೆ ಮೈದಾನದ ಅಭಿವೃದ್ದಿಗೆ ಗಮನಕೊಟ್ಟು ಎಲ್ಲಾ ಒಂದೇ ಕಡೆ ಸಂತೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟರು. ವಾರದ ಸಂತೆ ಸಮಸ್ಯೆ ಬಗೆಹರಿಸಿ ವ್ಯಾಪಾರಸ್ಥರಿಗೆ ತಮ್ಮ ವಹಿವಾಟು ನಡೆಸಲು ಸಂತೆ ಮೈದಾನದ ಗುಂಡಿ ಬಿದ್ದ ಜಾಗವನ್ನು ಸಮತಟ್ಟು ಮಾಡಿ ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ಸಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಸ್ಥಳೀಯ ನಿವಾಸಿ ಗಿರೀಶ್ ಮಾತನಾಡಿ, ನಿರ್ದಿಷ್ಟ ಸ್ಥಳ ಇಲ್ಲದೆ ವ್ಯಾಪಾರ ಮಾಡಲು ಕಷ್ಟವಾಗಿತ್ತು. ಜೂನಿಯರ್ ಕಾಲೇಜು ಮೈದಾನ, ಹರ್ಡಿಕರ್ ವೃತ್ತ ಮತ್ತು ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿತ್ತು. ನಂತರ ಹಳೆ ಮೂಡಿಗೆರೆ ರಸ್ತೆ ಪಕ್ಕದ ಸಂತೆ ಮೈದಾನದ ಮಾಡಿ ಅಲ್ಲಿ ವಾರದ ಸಂತೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದರೂ ಕೂಡ ಸರಿಯಾದ ಸ್ಥಳ ಇಲ್ಲದೆ ವ್ಯಾಪಾರಸ್ಥರು ರಸ್ತೆಯ ಎಡಬಲ ಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಹಾಗೂ ವಾಹನ ಸಂಚಾರರಿಗೆ ತಿರುಗಾಡಲು ಕಷ್ಟವಾಗಿತ್ತು. ಈ ಸಮಸ್ಯೆ ಅರಿತು ಪುರಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದು ಅದರಂತೆ ಪುರಸಭೆ ಅಧ್ಯಕ್ಷ ಎಆರ್ ಅಶೋಕ್ ಅವರು ಇಲ್ಲಿರುವ ಹಳೆಕೆರೆ ಗುಂಡಿ ಬಿದ್ದ ಜಾಗವನ್ನು ಜೆಸಿಬಿಯಿಂದ ಮಣ್ಣು ಹಾಕಿಸಿ ಗುಂಡಿ ಮುಚ್ಚಿ ಸಮತಟ್ಟು ಮಾಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಮಾತನಾಡಿ, ಬಹಳ ವರ್ಷಗಳಿಂದ ಈ ಸಂತೆಮೈದಾನದಲ್ಲಿ ಸಾಕಷ್ಟು ಸಮಸ್ಯೆ ಇದೆ. ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳು ಹಾಗೂ ದೇವಸ್ಥಾನಕ್ಕೆ ಬರುವಂತ ಪ್ರವಾಸಿಗರಿಗೆ ರಸ್ತೆಯ ಅಕ್ಕಪಕ್ಕ ವ್ಯಾಪಾರ ಮಾಡುತ್ತಿದ್ದು ವಾಹನವನ್ನು ಅಡ್ಡಾದಿಡ್ಡಿ ನಿಲ್ಲಿಸಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಕಳೆದ ಮೂರು ವರ್ಷದಿಂದ ಸಾಮಾನ್ಯ ಸಭೆಯಲ್ಲಿ ಕೂಡ ಇದರ ಬಗ್ಗೆ ಚರ್ಚೆ ಮಾಡಿದ್ದೆವು. ತಾವು ಅಧ್ಯಕ್ಷನಾದ ನಂತರ ಪುರಸಭೆಯಲ್ಲಿ ಹಣ ಇಲ್ಲದಿದ್ದರೂ ಬಜೆಟ್ ನಲ್ಲಿ ಹಣ ಸಂಗ್ರಹಿಸಿ ಗುತ್ತಿಗೆದಾರಿಗೆ ಕೊಡಲು ತೀರ್ಮಾನಿಸಿ ಟೆಂಡರ್ ಕರೆದು ಅದರ ಪ್ರಕಾರ ಪ್ರಕ್ರಿಯೆ ನಡೆಸಿ ಇಲ್ಲಿಯ ಜಾಗವನ್ನು ಸಮತಟ್ಟು ಮಾಡಿಕೊಡುತ್ತಿದ್ದೇವೆ. ಈ ಜಾಗ ಪುರಸಭೆಯವರದಲ್ಲ, ಸರಕಾರದ ಜಾಗ ದೇವಸ್ಥಾನಕ್ಕೆ ಸೇರಿದೆ. ತಾತ್ಕಾಲಿಕವಾಗಿ ನಾವು ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದು ಬೀದಿದೀಪ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಿಕೊಡುವ ಉದ್ದೇಶದಿಂದ ನಾವು ಈ ಕೆಲಸ ಪುರಸಭೆ ವತಿಯಿಂದ ಮಾಡಿಕೊಡುತ್ತಿದ್ದೇವೆ. ಪಟ್ಟಣದ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಅಧಿಕಾರದ ಅವಧಿಯಲ್ಲಿ ಶ್ರಮಿಸಿ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.ಈ ವೇಳೆ ಸಂತೆ ವ್ಯಾಪಾರ ಮಾಡಲು ಸರಗವಾಗಿ ನಡೆಸಲು ಅನುವು ಮಾಡಿಕೊಟ್ಟ ಪುರಸಭಾ ಅಧ್ಯಕ್ಷ ಎ.ಆರ್ ಅಶೋಕ್ ಅವರಿಗೆ ಸಂತೆ ವ್ಯಾಪಾರಿಗಳು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಶೋಕ್, ಇತರರು ಇದ್ದರು.