ಕನ್ನಡಪ್ರಭ ವಾರ್ತೆ ಅರಸೀಕೆರೆ

ಬೇಲೂರು ಕ್ಷೇತ್ರದ ಗಡಿಭಾಗವಾದ ಜಾವಗಲ್ ಹೋಬಳಿಯ ನಾಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುಸ್ಥಿತಿ ಇದೀಗ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿ ಪರಿಣಮಿಸಿದೆ. ಒಂದರಿಂದ ಏಳನೇ ತರಗತಿವರೆಗೆ ನಡೆಯುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಜೀವಭಯದ ನಡುವೆ ಪಾಠ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಯಲ್ಲಿ ಇರುವ ಎರಡು ಕಟ್ಟಡಗಳಲ್ಲಿ ಒಂದು ಮಾತ್ರ ಸುಸ್ಥಿತಿಯಲ್ಲಿದ್ದು, ಮತ್ತೊಂದು ಕಟ್ಟಡ ಅತ್ಯಂತ ಶಿಥಿಲಾವಸ್ಥೆಗೆ ತಲುಪಿದೆ. ಗೋಡೆಗಳ ನಡುವೆ ಬಿರುಕು ಬಿದ್ದಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಅಪಾಯ ಎದುರಾಗಿದೆ. ಇಂತಹ ಅಪಾಯಕರ ಸ್ಥಿತಿಯಲ್ಲಿಯೇ ಮೇಲ್ಚಾವಣಿಗೆ ಕಬ್ಬಿಣದ ಶೀಟುಗಳ ಮೇಲೆ ಹೆಂಚುಗಳನ್ನು ಅಳವಡಿಸಿರುವುದು ತಾಂತ್ರಿಕವಾಗಿ ಪ್ರಶ್ನಾರ್ಹವಾಗಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕಾಮಗಾರಿ ನಡೆಯುವ ವೇಳೆ ಗೋಡೆಗಳು ಕುಸಿದಿದ್ದರೆ ಕಾರ್ಮಿಕರ ಜೀವಕ್ಕೂ ಅಪಾಯ ಉಂಟಾಗಬಹುದಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಮಳೆಗಾಲ ಆರಂಭವಾದರೆ ಕಟ್ಟಡದ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ. ಈವರೆಗೆ ಜನಪ್ರತಿನಿಧಿಗಳು ಹೊಸ ಕೊಠಡಿಗಳನ್ನು ನಿರ್ಮಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಮಕ್ಕಳು ಭಯದ ವಾತಾವರಣದಲ್ಲಿ ವ್ಯಾಸಂಗ ಮಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರಿ ಶಾಲೆಗಳತ್ತ ಪೋಷಕರ ನಂಬಿಕೆ ಕುಸಿಯುವಂತಾಗಿದೆ. ಉಚಿತ ಬಿಸಿ ಊಟ, ಮೊಟ್ಟೆ ಸೇರಿದಂತೆ ವಿವಿಧ ಯೋಜನೆಗಳು ಇದ್ದರೂ, ಮೂಲಭೂತ ಸುರಕ್ಷತೆ ಇಲ್ಲದಿದ್ದರೆ ಅವು ಪ್ರಯೋಜನಕಾರಿಯಾಗುವುದಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಕ್ರಿಯಾಶೀಲರಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಾಗಿರುವುದರಿಂದ ಈ ಶಾಲೆಯೇ ಅವರ ಭವಿಷ್ಯಕ್ಕೆ ಆಧಾರವಾಗಿದೆ. ಆದರೆ ಶಿಥಿಲ ಕಟ್ಟಡದ ಕಾರಣದಿಂದ ಪೋಷಕರು ಮಕ್ಕಳನ್ನು ಸೇರ್ಪಡೆಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಪೋಷಕರುಈ ಕೂಡಲೇ ಶಾಸಕರು ಶಾಲೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಕನಿಷ್ಠ ಎರಡು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೇಸಿಗೆ ರಜೆ ಅವಧಿಯಲ್ಲಾದರೂ ಈ ಕೆಲಸ ಕೈಗೊಂಡರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಸರಕಾರಿ ಶಾಲೆಗಳನ್ನು ಉಳಿಸಲು ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಗತ್ಯವಾಗಿದ್ದು, ನಾಗೇನಹಳ್ಳಿ ಶಾಲೆಯ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂಬುದು ಗ್ರಾಮಸ್ಥರು ಹಾಗೂ ಪೋಷಕರ ಒತ್ತಾಯವಾಗಿದೆ.