ಕನ್ನಡಪ್ರಭ ವಾರ್ತೆ ಆಲೂರು
ಆಶ್ರಯ ನಿವೇಶನ ಹಂಚಿಕೆಗೆ ಶಾಸಕರ ಸಿಮೆಂಟ್ ಮಂಜುರವರು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಅಂತಿಮ ಮುದ್ರೆ ಒತ್ತುವ ಮೂಲಕ ಫಲಾನುಭವಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.ಪಟ್ಟಣದ ತಾಪಂ ಸಭಾಂಗನದಲ್ಲಿ ಏರ್ಪಡಿಸಲಾಗಿದ್ದ ಆಶ್ರಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೪ ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರದೊಂದಿಗೆ ಇ-ಸ್ವತ್ತನ್ನು ಸಹ ನೀಡಲಾಗುವುದು. ಸುಮಾರು ೨೦ ವರ್ಷಗಳಿಂದ ನಿವೇಶನ ಹಂಚಿಕೆಗೆ ಹಲವು ಅಡಚಣೆ ಉಂಟಾಗಿತ್ತು. ಫಲಾನುಭವಿಗಳಿಗೆ ಸಂಬಂಧಿಸಿದ ಹಕ್ಕುಪತ್ರ ಇತರೆ ದಾಖಲೆ ನೀಡಿರಲಿಲ್ಲ. ಇದರಿಂದ ಅತಂತ್ರ ಪರಿಸ್ಥಿತಿಗೊಳಗಾಗಿದ್ದರು. ಈಗ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರದೊಂದಿಗೆ ಇ-ಖಾತೆ ಮಾಡಿ ಕೊಡಲಾಗುವುದು. ನಂತರ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡು ಅನುಭವಿಸಬಹುದು ಎಂದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಪೌರಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ, ಪಟ್ಟಣ ಪಂಚಾಯಿತಿ ೧೩ ಪೌರಕಾರ್ಮಿಕರಿಗೆ ನಿವೇಶನ ಹಂಚಲಾಗುವುದು. ಅತಿ ಶೀಘ್ರದಲ್ಲಿ ಅವರಿಗೂ ಹಕ್ಕುಪತ್ರ ನೀಡಲಾಗುವುದು ಎಂದರು.ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಈ ಹಿಂದೆ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ತಾಂತ್ರಿಕ ಕಾರಣದಿಂದ ಕೆಲವರಿಗೆ ನೀಡಿರಲಿಲ್ಲ. ಪಟ್ಟಣ ಪಂಚಾಯಿತಿ ವತಿಯಿಂದಲೆ ಹಕ್ಕುಪತ್ರ ನೀಡಲು ಸರ್ಕಾರ ಅನುಮತಿ ನೀಡಿದೆ. ಈಗ ಮೂಲ ಹಕ್ಕುಪತ್ರಗಳನ್ನು ನೋಂದಣಿ ಮಾಡಿ ಇ-ಖಾತೆ ಮಾಡಿ ಫಲಾನುಭವಿಗಳಿಗೆ ವಿತರಿಸಲಾಗುವುದು. ೨೦ ವರ್ಷ ಪರಭಾರೆ ಮಾಡುವಂತಿಲ್ಲ ಎಂದರು.ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ, ಜಿ. ಪಿ. ಲಲಿತಮ್ಮ, ಸುಮಿತ್ರ ಉಪಸ್ಥಿತರಿದ್ದರು.
===ಫೋಟೋ:
ಆಲೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು, ಇಒ ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.