ಸಾರಾಂಶ
2022-23ರಲ್ಲಿ ನರಗುಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಿಲ್ ಪಾವತಿಯಲ್ಲಿ ವಿಳಂಬ
ಕಾಮಗಾರಿ ಕಳಪೆ ಆರೋಪ, ತನಿಖೆಗೆ ಸಿಎಂ ಆದೇಶ, ಹಣ ಬಿಡುಗಡೆಗೆ ಆಗ್ರಹಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗ
2022-23ರ ಅವಧಿಯಲ್ಲಿ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನವಾಗಿರುವ ವಿವಿಧ ಕಾಮಗಾರಿಗಳು ಸದ್ಯ ಗದಗ ಜಿಲ್ಲೆ ಮಾತ್ರವಲ್ಲ, ರಾಜ್ಯದಲ್ಲಿಯೇ ತೀವ್ರ ಚರ್ಚೆಯ ವಸ್ತುವಾಗಿದೆ. ಬಹುತೇಕ ಕಾಮಗಾರಿಗಳು ಕಳಪೆಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ಕಳೆದ ಸಾಲಿನಲ್ಲಿ ಆಗಿರುವ ಕಾಮಗಾರಿಗಳಲ್ಲಿ ಸಾಕಷ್ಟು ಕಳಪೆಯಾಗಿದೆ, ವಿವಿಧೆಡೆ ನಿಯಮಗಳನ್ನು ಪಾಲಿಸಿಲ್ಲ, ಈ ಬಗ್ಗೆ ಲೋಕಾಯುಕ್ತ ಅಥವಾ ಸಿಒಡಿ ತನಿಖೆ ನಡೆಸುವಂತೆ 30-6-2023ರಂದು ಯಾವಗಲ್ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ, 11-9-2023ರಂದು ಸರ್ಕಾರದ ಆದೇಶ ಹೊರಡಿಸಿ ಲೋಕೋಪಯೋಗಿ ಇಲಾಖೆಯ ಕ್ವಾಲಿಟಿ ಕಂಟ್ರೋಲ್ ಸೇರಿದಂತೆ 4 ಪ್ರಮುಖ ವಿಭಾಗಗಳ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿ, ತನಿಖೆ ಮಾಡಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಹಾಲಿ ಶಾಸಕ ಸಿ.ಸಿ. ಪಾಟೀಲ, ಅಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ, ನಡೆದಿದ್ದರೆ ಅವುಗಳ ಸಮಗ್ರ ತನಿಖೆಯಾಗಲಿ, ತನಿಖೆಗೆ ನಾವೆಲ್ಲರೂ ಸಹಕರಿಸುತ್ತೇವೆ. ಆದರೆ ಅನಗತ್ಯವಾಗಿ ಗುತ್ತಿಗೆದಾರರ ಹಣವನ್ನು ಬಿಡುಗಡೆ ಮಾಡಲು ತಡೆ ಹಿಡಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಲ್ಲದೇ ಅವರು ಕೂಡಾ ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆದಿದ್ದರು. ಈ ವಿಚಾರ ಜಿಲ್ಲೆಯ ರಾಜಕೀಯ ವಲಯದಲ್ಲಿ ಬಹು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.ಸಿಎಂ ಅಂಗಳಕ್ಕೆ:
2022-23ನೇ ಸಾಲಿನಲ್ಲಿ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂರಾರು ಕೋಟಿ ಕಾಮಗಾರಿಗಳು ಅನುಷ್ಠಾನವಾಗಿದ್ದು, ಈ ವಿಷಯ ಸದ್ಯ ರಾಜಕೀಯದ ವಸ್ತುವಾಗಿದೆ. ಹಾಲಿ ಮತ್ತು ಮಾಜಿ ಶಾಸಕರು ಇದೇ ಕಾಮಗಾರಿಗಳ ವಿಷಯವಾಗಿ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರಿಂದಾಗಿ ಹಣ ಹಾಕಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಹಣ ಸಂದಾಯವಾಗದೇ ತೀವ್ರ ತೊಂದರೆಯಾಗಿದೆ. ಈಗಾಗಲೇ ಈ ವಿಷಯವಾಗಿ ಗುತ್ತಿಗೆದಾರರ ಸಾಕಷ್ಟು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅ. 18ರಂದು ನರಗುಂದ ತಾಲೂಕು ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯ ಅವರಿಗೆ, ಅ. 19ರಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದು, ಸದ್ಯ ನರಗುಂದ ಕ್ಷೇತ್ರದ ಕಾಮಗಾರಿಗಳ ಹಣ ಬಿಡುಗಡೆಯ ವಿಷಯ ಸಿಎಂ ಅಂಗಳಕ್ಕೆ ತಲುಪಿದೆ.ಮನವಿಯಲ್ಲೇನಿದೆ?ಗುತ್ತಿಗೆದಾರರು ನಿಯಮಾನುಸಾರವೇ ಎಲ್ಲ ಕಾಮಗಾರಿ ನಡೆಸಿದ್ದಾರೆ. ಕಾಮಗಾರಿ ಆದೇಶ ಅಧಿಕೃತವಾಗಿಯೇ ಪಡೆದು ಮಾಡಿದ್ದಾರೆ. ಇಲಾಖೆಯ ವಿವಿಧ ಹಂತಗಳಲ್ಲಿ ಕ್ವಾಲಿಟಿ ಪರಿಶೀಲನೆಯಾಗಿದೆ. ಸದ್ಯ ನೀವೇ (ಸಿಎಂ) ಸೂಚಿಸಿರುವ ಕಮಿಟಿಯೂ ತನಿಖೆ ನಡೆಸುತ್ತಿದೆ. ಆದರೆ ತನಿಖೆ ವಿಳಂಬವಾಗುವ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಮಕ್ಕಳ ಶಾಲಾ ಫೀ ಕಟ್ಟಲು ಸಹ ತೊಂದರೆಯಾಗಿದೆ. ಬ್ಯಾಂಕ್ ಒಡಿ, ಕೈಗಡ ಸಾಲ ಸೇರಿದಂತೆ ಸಾಕಷ್ಟು ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ತಕ್ಷಣವೇ ಗುತ್ತಿಗೆದಾರರಿಗೆ ಬರಬೇಕಾದ ನ್ಯಾಯಯುತ ಹಣವನ್ನು ಬಿಡುಗಡೆ ಮಾಡಬೇಕು ಎಂದು ವಿನಂತಿಸಿದ್ದಾರೆ.ಗುತ್ತಿಗೆದಾರರು ಸಮಸ್ಯೆಯಲ್ಲಿ: ಕಾಮಗಾರಿಗಳ ವಿಷಯವಾಗಿ ಮಾಜಿ ಶಾಸಕರ ಪತ್ರದ ನಂತರ ಸರ್ಕಾರ ಎಲ್ಲ ಕಾಮಗಾರಿಗಳ ಹಣ ಬಿಡುಗಡೆ ಮಾಡದೇ ಸ್ಥಗಿತಗೊಳಿಸಿದ್ದರಿಂದಾಗಿ ಗುತ್ತಿಗೆದಾರರು ತೀವ್ರ ಸಮಸ್ಯೆಯಲ್ಲಿದ್ದು, ಕೋಟ್ಯಂತರ ಹಣ ಹಾಕಿ ಒಂದು ರುಪಾಯಿ ಮರಳಿ ಬಾರದೇ ಸಾಲದ ಸುಳಿಗೆ ಸಿಲುಕಿದ್ದೇವೆ. ಮುಖ್ಯಮಂತ್ರಿಗಳು ತಕ್ಷಣವೇ ಸ್ಪಂದಿಸಿ, ಕಾಮಗಾರಿ ಹಣ ಬಿಡುಗಡೆ ಮಾಡದೇ ಇದ್ದಲ್ಲಿ ಹಲವಾರು ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ತುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎನ್ನುವುದು ಗುತ್ತಿಗೆದಾರನೋರ್ವನ ನೋವಿನ ಮಾತಾಗಿದೆ. ಮುಖ್ಯಮಂತ್ರಿಗಳು ಈ ವಿಷಯ ಕೂಡಲೇ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಈಗಾಗಲೇ ಹಲವಾರು ಕಾಮಗಾರಿಗಳ ವರದಿಗಳು ಬಂದಿದ್ದು, ಅವುಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಹಣ ಬಿಡುಗಡೆ ಮಾಡುತ್ತಾರೆ ಎಂದಿದ್ದಾರೆ. ಎಚ್.ಕೆ. ಪಾಟೀಲ ಅವರಿಗೂ ಮನವಿ ನೀಡಿದ್ದು, ಇದನ್ನು ಸಾಧ್ಯವಾದಷ್ಟು ಬೇಗನೇ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಿಯಾಂಕ ಖರ್ಗೆ ಅವರಿಗೂ ಮನವಿ ಸಲ್ಲಿಸಿದ್ದೇವೆ, ಎಲ್ಲ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೂಡಲೇ ಗುತ್ತಿಗೆದಾರರಿಗೆ ಬರಬೇಕಾದ ನ್ಯಾಯಯುತ ಹಣ ಬಿಡುಗಡೆ ಆದರೆ ಸಾಕು ಎನ್ನುತ್ತಾರೆ ನರಗುಂದ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಎನ್. ಪಾಟೀಲ.