ಗಡಿ ಗ್ರಾಮಗಳ ರಸ್ತೆ ದುರಸ್ತಿಗೆ ಕಡೆಗಣನೆ

| Published : Apr 02 2024, 01:03 AM IST

ಗಡಿ ಗ್ರಾಮಗಳ ರಸ್ತೆ ದುರಸ್ತಿಗೆ ಕಡೆಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಈ ರಸ್ತೆ ಡಾಂಬರೀಕರಣಕ್ಕೆ ಚಾಲನೆ ದೊರೆಯಿತಾದರೂ ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಗುತ್ತಿಗೆದಾರರು ರಸ್ತೆಗೆ ಜೆಲ್ಲಿಕಲ್ಲು, ಮಣ್ಣು ಹಾಕಿ ನಾಪತ್ತೆಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆಂಧ್ರ ಗಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯಲ್ಲಿದ್ದರಿಂದ ದುರಸ್ತಿಗೊಳಿಸಲು ವರ್ಷದ ಹಿಂದೆ ಚಾಲನೆ ನೀಡದರೂ ಇದುವರೆಗೂ ಕಾಮಗಾರಿ ಮಾತ್ರ ಅಪೂರ್ಣವಾಗಿದೆ. ಇದರಿಂದಾಗಿ ವಾಹನಗಳ ಸವಾರರು ನಿತ್ಯ ಸರ್ಕಾರವನ್ನು ಶಪಿಸಿಕೊಂಡೇ ಪ್ರಯಾಣಿಸುವಂತಾಗಿದೆ.

ತಾಲೂಕಿನ ದೋಣಿಮಗಡು ಗ್ರಾಮ ಪಂಚಾಯ್ತಿಯ ಮುಷ್ಟ್ರಹಳ್ಳಿಯಿಂದ ಆಂದ್ರದ ಗುಡಿವಂಕದವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ರಸ್ತೆ ಮೂಲಕ ನಿತ್ಯ ನೂರಾರು ವಾಹನಗಳು ಆಂಧ್ರ ಕುಪ್ಪಂಗೆ ಹೋಗಿ ಬರುತ್ತಾರೆ.

ಜೆಲ್ಲಿ ಸುರಿದು ಗುತ್ತಿಗೆದಾರ ನಾಪತ್ತೆ

ಆದರೆ ರಸ್ತೆ ಮಾತ್ರ ಅಧ್ವಾನಗೊಂಡಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಈ ರಸ್ತೆ ಡಾಂಬರೀಕರಣಕ್ಕೆ ಚಾಲನೆ ದೊರೆಯಿತಾದರೂ ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಗುತ್ತಿಗೆದಾರರು ರಸ್ತೆಗೆ ಜೆಲ್ಲಿಕಲ್ಲುಗಳನ್ನು ಹಾಕಿ ಅದರ ಮೇಲೆ ಮಣ್ಣು ಹಾಕಿ ಹೋದವರು ಇತ್ತ ಕಡೆ ಮತ್ತೆ ಮುಖ ಮಾಡಿಲ್ಲ.

ಈಗ ರಸ್ತೆ ತುಂಬಾ ಜೆಲ್ಲಿಕಲ್ಲುಗಳ ನಡುವೆ ವಾಹನಗಳು ಸಂಚರಿಸಬೇಕಾಗಿದೆ. ಅಲ್ಲದೆ ಗುಡುವಂಕ ಬಳಿಯಿರುವ ಪ್ರಸಿದ್ದ ಸುಬ್ರಮಣಿಸ್ವಾಮಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಕಾವಡಿ ಜಾತ್ರೆ ನಡೆಯುತ್ತದೆ,ಆಗ ಈ ರಸ್ತೆಯ ಮೂಲಕವೇ ಜಿಲ್ಲೆಯಿಂದಲ್ಲದೆ ಹೊರ ಜಿಲ್ಲೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವರು. ಇಂತಹ ರಸ್ತೆಯನ್ನು ಸರ್ಕಾರ ಯಾಕೆ ಕಡೆಗಣಿಸಿದೆ ಎಂಬುದು ಈ ಪ್ರದೇಶದ ಜನರ ಪ್ರಶ್ನೆಯಾಗಿದೆ.

ಚುನಾವಣೆ ಬಂದಾಗ ನೆನಪು

ಚುನಾವಣೆ ಬಂದಾಗ ಮಾತ್ರ ರಸ್ತೆಗಳ ದುರಸ್ತಿ ನೆನಪಾಗುವುದು,ಮತ ಪಡೆದ ನಂತರ ಮತ್ತೆ ಯಾರೂ ಈ ಕಡೆ ಮುಖ ಮಾಡುವುದಿಲ್ಲ ಎಂಬುದು ದೋಣಿಮಡಗು ಜನರ ಆರೋಪ. ದೋಣಿಮಡಗು ಪಂಚಾಯತಿ ಆಂದ್ರ, ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವುದರಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಡಿ ಗ್ರಾಮಗಳ ಕಡೆ ಆಸಕ್ತಿವಹಿಸುತ್ತಿಲ್ಲ ಎಂಬುದಕ್ಕೆ ಿದೊಂದು ಉದಾಹರಣೆ.

ಸಿಲ್ಲ ಎಂಬುದಕ್ಕೆ ಕದರಿನತ್ತ ಗ್ರಾಮಕ್ಕೆ ನಾಗರೀಕ ಸೌಲಭ್ಯ ಕಲ್ಪಿಸಿ ಎಂದು ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರು ಹೋರಾಟ ಮಾಡಿ ಬೆದರಿಕೆ ಹಾಕಿದ್ದೆ ಸಾಕ್ಷಿ.ಸರ್ಕಾರ ಈಗಲಾದರೂ ನೆನೆಗುದಿಗೆ ಬಿದ್ದಿರುವ ಈ ರಸ್ತೆ ದುರಸ್ಥಿ ಕಾಮಗಾರಿಯನ್ನು ಪೂರ್ಣಗೊಳಿಸಿ ಡಾಂಬರೀಕರಣ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಗೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಮತ್ತು ರೈತಸಂಘ ಎಚ್ಚರಿಸಿವೆ.