ಸಾರಾಂಶ
ಗ್ರಾಮದಲ್ಲಿ ಸುಮಾರು 150ಕ್ಕೂ ಮೇಲ್ಪಟ್ಟು ಮನೆಗಳಿದ್ದು, ಈ ಪೈಕಿ ಬಹುತೇಕರು ಜಾನುವಾರುಗಳನ್ನು ಮೇಯಿಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಲು ಇದೇ ಗೋಮಾಳವನ್ನು ನಂಬಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜಂಬಿಗೇಮರದಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರದ ಗೋಮಾಳ ಜಮೀನನ್ನು ಕೆಲ ಭೂಗಳ್ಳರು ಕಬಳಿಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಕ್ರಮ ವಹಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಜಂಬಿಗೇಮರದಹಳ್ಳಿ ಗ್ರಾಮದ ಸ.ನಂ. 130ರಲ್ಲಿ ಸುಮಾರು 98 ಎಕರೆ 37 ಗುಂಟೆ ಜಮೀನಿನ ಪೈಕಿ ಮಂಜೂರಾಗಿರುವ ಜಮೀನು ಬಿಟ್ಟು ಉಳಿದ ಜಮೀನಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದರು.
ಗಣಿಗಾರಿಕೆಗೆ ಅವಕಾಶ ನೀಡಬೇಡಿಗ್ರಾಮದಲ್ಲಿ ಸುಮಾರು 150ಕ್ಕೂ ಮೇಲ್ಪಟ್ಟು ಮನೆಗಳಿದ್ದು, ಈ ಪೈಕಿ ಬಹುತೇಕರು ಜಾನುವಾರುಗಳನ್ನು ಮೇಯಿಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಸ್ಥರಿಗೆ ಬೇರೆ ಎಲ್ಲಿಯೂ ತಮ್ಮ ಜಾನುವಾರುಗಳನ್ನು ಮೇಯಿಸಲು ಜಾಗವಿಲ್ಲ. ಎಲ್ಲರೂ ಇದೇ ಗೋಮಾಳ ಜಮೀನನ್ನು ನಂಬಿಕೊಂಡಿದ್ದಾರೆ. ಆದರೆ ಕೆಲವು ಭೂಗಳ್ಳರು, ಪಟ್ಟಭದ್ರ ಹಿತಾಸಕ್ತಿಗಳು ಗಣಿಗಾರಿಕೆಯ ಮೂಲಕ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಒಂದು ವೇಳೆ ಇದು ಸತ್ಯವಾದರೇ ಗ್ರಾಮದ ಜಾನುವಾರುಗಳಿಗೆ ಮೇವಿಲ್ಲದೇ ಗ್ರಾಮಸ್ಥರು ಜೀವನ ನಡೆಸಲು ಕಷ್ಟಕರವಾಗುತ್ತದೆ. ಆದ್ದರಿಂದ ಈ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುಡಿಬಂಡೆ ತಹಸೀಲ್ದಾರ್ ಮನೀಷಾ ರವರಿಗೆ ಈ ಸಮಯದಲ್ಲಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಗೌಡ, ವೇದಿಕೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.