ಬಾಗಲಕೋಟೆ : ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

| Published : Apr 11 2024, 12:54 AM IST / Updated: Apr 11 2024, 12:24 PM IST

ಸಾರಾಂಶ

ಲೋಕಸಭಾ ಚುನಾವಣೆ-2024ರ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು ₹170 ಕೋಟಿ ನಗದು ಹಣ, ₹8.02 ಕೋಟಿ ಮೌಲ್ಯದ 2012.30 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ.

 ಬಾಗಲಕೋಟೆ :  ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏ.12 ರಿಂದ 19 ವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರಗಳನ್ನು ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಲಾದ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿರುವ ಎಲ್ಲ ಸೂಚನೆಗಳನ್ನು ಪಾಲಿಸುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರವನ್ನು ನಮೂನೆ-2ಎನಲ್ಲಿ ಸಲ್ಲಿಸಬೇಕು. ನಮೂನೆ-26ರಲ್ಲಿ ₹100 ಛಾಪಾ ಕಾಗದದಲ್ಲಿ ಅರ್ಭ್ಯರ್ಥಿಯ ಘೋಷಣಾ ಪತ್ರ, ಬೇ-ಬಾಕಿಗೆ ಸಂಬಂಧಿಸಿದ ಇಲಾಖೆ ಹಾಗೂ ನೋಟರಿ ಪಬ್ಲಿಕ್ ಅವರಿಂದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದರು.

ಸಾಮಾನ್ಯ ಅಭ್ಯರ್ಥಿಗಳಿಗೆ ₹25 ಸಾವಿರ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ₹12500 ಭದ್ರತಾ ಠೇವಣಿ ನಿಗದಿಪಡಿಸಲಾಗಿದೆ. ರಾಷ್ಟ್ರೀಯ, ರಾಜ್ಯ ಮಾನ್ಯತೆ ಪಡೆದ ಪಕ್ಷವಾಗಿದ್ದಲ್ಲಿ ಒಬ್ಬರು, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷ, ಪಕ್ಷೇತರರು ಹತ್ತು ಸೂಚಕರು ಸಹಿ ಮಾಡಿರಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿದ್ದಲ್ಲಿ ಎ ಮತ್ತು ಬಿ ನಮೂನೆ ನಾಮಪತ್ರ ಸಲ್ಲಿಸುವ ಕೊನೆಯ ದಿನ ಏ.19 ರಂದು ಮಧ್ಯಾಹ್ನ 3 ಗಂಟೆ ಒಳಗೆ ಸಲ್ಲಿಸಬೇಕು. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಬೇಕು ಎಂದರು.

ಜಿಲ್ಲೆಯಲ್ಲಿ ಏ.9 ವರೆಗೆ ಇದ್ದಂತೆ ಪುರುಷ 893698, ಮಹಿಳಾ 908664 ಹಾಗೂ ತೃತೀಯ ಲಿಂಗ 100 ಸೇರಿ ಒಟ್ಟು 1802462 ಮತದಾರರಿದ್ದಾರೆ. ಲೋಕಸಭಾ ಮತಕ್ಷೇತ್ರಗಳಿಗೆ ಒಳಪಡುವ 1946 ಮತಗಟ್ಟೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರ್‍ಯಾಂಪ್‌ ಸೌಲಭ್ಯ, ವಿದ್ಯುಚ್ಛಕ್ತಿ, ಪೀಠೋಪಕರಣ, ಪುರುಷ ಹಾಗೂ ಮಹಿಳಾ ಶೌಚಾಲಯ ಒದಗಿಸಲಾಗುತ್ತಿದೆ. ಈಗಾಗಲೇ ಸೆಕ್ಟರ ಅಧಿಕಾರಿ, ಖರ್ಚುವೆಚ್ಚ ತಂಡ, ನೀತಿ ಸಂಹಿತೆ ಪಾಲನಾ ತಂಡ, ಪೊಲೀಸ್ ಸಿಬ್ಬಂದಿಗೆ ಹಾಗೂ ಮತಗಟ್ಟೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ 1950 ಮೂಲಕ ಒಟ್ಟು 376 ಸ್ವೀಕೃತಗೊಂಡಿದ್ದು, ಎಲ್ಲ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. 85 ವರ್ಷ ಮೇಲ್ಪಟ್ಟ ಗೈರು ಹಾಜರಿ ಮತದಾರರು 13467 ಇದ್ದರೆ, ವಿಕಲಚೇತನ ಗೈರು ಹಾಜರಿ ಮತದಾರರು 26553 ಇದ್ದಾರೆ. ಸಿ-ವಿಜಿಲ್ ಮೂಲಕ ಬಂದ 3279 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕರು ಆಗಿರುವ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ತಹಶೀಲ್ದಾರ ಪಂಪಯ್ಯ ಇದ್ದರು.

ಲೋಕಸಭಾ ಚುನಾವಣೆ-2024ರ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು ₹170 ಕೋಟಿ ನಗದು ಹಣ, ₹8.02 ಕೋಟಿ ಮೌಲ್ಯದ 2012.30 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ₹40 ಸಾವಿರ ಮೌಲ್ಯದ ಗಾಂಜಾ ಸಹ ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ.

ಜಾನಕಿ ಕೆ.ಎಂ, ಜಿಲ್ಲಾ ಚುನಾವಣಾಧಿಕಾರಿ