ಹೊಯ್ಗೆಬಜಾರ್‌- ಕೂಳೂರು ಜಲಮಾರ್ಗ ಯೋಜನೆಗೆ ಆಕ್ಷೇಪ

| Published : Oct 18 2025, 02:02 AM IST

ಸಾರಾಂಶ

ಹೊಯ್ಗೆಬಜಾರ್‌- ಕೂಳೂರು ನಡುವೆ ಜಲಮಾರ್ಗದಲ್ಲಿ ರೋರೋ ಹಡಗುಗಳ ಸಂಚಾರಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿಯು ವಿನೂತನ ಯೋಜನೆ ಪ್ರಸ್ತಾಪಿಸಿದ್ದು, ಇದಕ್ಕೆ ಸ್ಥಳೀಯರು, ಪರಿಸರಾಸಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ಸಾಗರಮಾಲಾ ಯೋಜನೆಯಡಿ ಹೊಯ್ಗೆಬಜಾರ್‌- ಕೂಳೂರು ನಡುವೆ ಜಲಮಾರ್ಗದಲ್ಲಿ ರೋರೋ ಹಡಗುಗಳ ಸಂಚಾರಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿಯು ವಿನೂತನ ಯೋಜನೆ ಪ್ರಸ್ತಾಪಿಸಿದ್ದು, ಇದಕ್ಕೆ ಸ್ಥಳೀಯರು, ಪರಿಸರಾಸಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಅಧ್ಯಕ್ಷತೆಯಲ್ಲಿ ಹಳೆ ಬಂದರು ಪ್ರದೇಶದಲ್ಲಿ ಗುರುವಾರ ಈ ಕುರಿತು ಆಕ್ಷೇಪ ದಾಖಲಿಸಲು ಪರಿಸರ ಆಲಿಕೆ ಸಭೆ ನಡೆಯಿತು.

ಯೋಜನೆ ಕುರಿತು ಮಾಹಿತಿ ನೀಡಿದ ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಸನ್ನ ಕುಮಾರ್‌, ಅಂದಾಜು 29.62 ಕೋಟಿ ರು.ಗಳ ಜಲಮಾರ್ಗಗಳ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರದಿಂದ 2022ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಅದರಂತೆ ಸರಕು ಸಾಗಾಟಕ್ಕೆ ಪೂರಕವಾಗಿ ಕೂಳೂರು ಮತ್ತು ಹೊಯ್ಗೆಬಜಾರ್‌ ನಡುವೆ ರೋರೋ ಹಡಗುಗಳ ಸಂಚಾರಕ್ಕೆ ಯೋಜನೆ ರೂಪಿಸಲಾಗಿದ್ದು, ಎರಡೂ ಪ್ರದೇಶಗಳಲ್ಲಿ ರೋರೋ ಜೆಟ್ಟಿ ನಿರ್ಮಾಣವಾಗಲಿದೆ. ತಲಾ 400 ಮೆಟ್ರಿಕ್‌ ಟನ್‌ ಸಾಗಾಟ ಸಾಮರ್ಥ್ಯದ ಎರಡು ರೋರೋ ಹಡಗುಗಳು ಕಾರ್ಯಾಚರಿಸಲಿದ್ದು, ಪ್ರತಿದಿನ 200 ಪ್ರಯಾಣಿಕರೊಂದಿಗೆ 6 ರೋರೋ ಟ್ರಿಪ್‌ಗಳು ಕಾರ್ಯ ನಿರ್ವಹಿಸಲಿವೆ. ಪ್ರತಿ ಹಡಗು ಆರು ಟ್ರಿಪ್‌ನಂತೆ ದಿನಕ್ಕೆ ಒಟ್ಟು 12 ಟ್ರಿಪ್‌ಗಳನ್ನು ನಡೆಸಲಿವೆ. ಯೋಜನೆ ಅನುಷ್ಠಾನಕ್ಕೆ 18 ತಿಂಗಳ ಅವಧಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಪರಿಸರ ಸಮಸ್ಯೆ: ಎನ್‌ಇಸಿಎಫ್‌ ಸಂಘಟನೆಯ ಶಶಿಧರ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ಯೋಜನೆಗೆ ಟೆಂಡರ್‌ ಆಗಿದೆ ಎಂದು ಹೇಳಲಾಗಿದೆ. ಆದರೆ ಪರಿಸರ ಸಂಬಂಧಿ ಅನುಮತಿ ದೊರೆಯದೆ ಟೆಂಡರ್‌ ಮಾಡಿದ್ದು ಹೇಗೆ? ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ನದಿ ಪ್ರದೇಶ ಒತ್ತುವರಿಯಾಗಿದೆ. ಪರಿಸರ ಸಮತೋಲನ ಕಾಪಾಡಲು ಇನ್ನಾದರೂ ನದಿಯನ್ನು ಉಳಿಸಬೇಕಾಗಿದೆ ಎಂದು ಹೇಳಿದರಲ್ಲದೆ, ಹಳೆ ಬಂದರು ಭಾಗದಲ್ಲಿ ಬಂದರು ಭೂಮಿ ಎಂದು ಘೋಷಣೆ ಮಾಡಲು ಸಂಬಂಧಪಟ್ಟ ಆರ್‌ಟಿಸಿ ಇದೆಯೇ ಎಂದು ಪ್ರಶ್ನಿಸಿದರು.

ಮಂಗಳೂರು ಟ್ರಾಲ್‌ ಬೋಟ್‌ ಯೂನಿಯನ್‌ ಅಧ್ಯಕ್ಷ ಚೇತನ್‌ ಬೆಂಗ್ರೆ ಮಾತನಾಡಿ, ಪ್ರಸ್ತುತ ಮಂಗಳೂರು ದಕ್ಕೆಯಲ್ಲಿ 100 ಮೀನುಗಾರಿಕಾ ಬೋಟ್‌ ನಿಲ್ಲಿಸುವ ಜಾಗದಲ್ಲಿ 1300 ಬೋಟ್‌ಗಳನ್ನು ಅಸುರಕ್ಷಿತ ಮಾದರಿಯಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ದಕ್ಕೆ ಅಭಿವೃದ್ಧಿಯ ಜತೆಗೆ ಭವಿಷ್ಯದಲ್ಲಿ 4 ಮತ್ತು 5ನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಯೋಜನೆ ಆಗಬೇಕಾಗಿದೆ ಎಂದರು.

ಮಂಗಳೂರು ಟ್ರಾಲ್‌ಬೋಟ್‌ ಯೂನಿಯನ್‌ ಉಪಾಧ್ಯಕ್ಷ ಇಬ್ರಾಹಿಂ ಮಾತನಾಡಿ, ಯೋಜನೆ ರೂಪಿಸುವ ಸಂದರ್ಭ ಬ್ರೇಕ್‌ ವಾಟರ್‌ ವ್ಯವಸ್ಥೆ ಮಾಡಬೇಕು. ಗುರುಪುರ ಹಾಗೂ ನೇತ್ರಾವತಿ ನದಿಯಲ್ಲಿ ಸಮರ್ಪಕ ಡ್ರೆಜ್ಜಿಂಗ್‌ ಆಗಬೇಕು ಎಂದು ಆಗ್ರಹಿಸಿದರು.

ಜನರಿಗೆ ತೊಂದರೆ ಮಾಡಬೇಡಿ: ಕಸಬಾ ಬೆಂಗರೆ ಜಮಾಅತ್‌ ಅಧ್ಯಕ್ಷ ಬಿಲಾಲ್‌ ಮೊಯ್ದಿನ್‌ ಮಾತನಾಡಿ, ಈ ವ್ಯಾಪ್ತಿಯ 2 ಸಾವಿರ ಮನೆಗಳಲ್ಲಿ 25 ಸಾವಿರಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಜನಜೀವನಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದರು.

ಸಾಮಾಜಿಕ ಕಾರ್ಯಕರ್ತ ಬಿ.ಕೆ. ಇಮ್ತಿಯಾಝ್‌ ಅವರು ಯೋಜನೆಗೆ ಸಂಪೂರ್ಣ ಆಕ್ಷೇಪವನ್ನು ವ್ಯಕ್ತಪಡಿಸುವುದಾಗಿ ಹೇಳಿದರು. ಮಾಜಿ ಕಾರ್ಪೊರೇಟರ್‌ ಅಬ್ದುಲ್‌ ಲತೀಫ್‌ ಮಾತನಾಡಿ, ಈಗಾಗಲೇ ಈ ಪ್ರದೇಶದಲ್ಲಿ ಬಂದಿರುವ ಯೋಜನೆಗಳಿಂದ ನೋವು ಅನುಭವಿಸಿರುವ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕಾಗಿದೆ. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಇಲ್ಲಿ ಲಕ್ಷದ್ವೀಪದ ಹಡಗುಗಳು ಬರುತ್ತವೆ. ಹಾಗಾಗಿ ಯೋಜನೆಯಿಂದಾಗುವ ಸಮಸ್ಯೆಗಳನ್ನು ಮೊದಲು ನಿವಾರಿಸಬೇಕು ಎಂದರು. ಬೆಂಗರೆ ನಿವಾಸಿ, ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಬ್ದುಲ್‌ ತಯ್ಯೂಬ್‌, ಸ್ಥಳೀಯರಾದ ಅರುಣ್‌ ಕುಮಾರ್‌ ಮತ್ತಿತರರು ಯೋಜನೆಯಿಂದಾಗುವ ಅನಾಹುತಗಳ ಬಗ್ಗೆ ಗಮನ ಸೆಳೆದರು.

ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಮಾತನಾಡಿ, ನಗರ ಪ್ರದೇಶದಲ್ಲಿ ಯಾವುದೇ ರೀತಿಯ ತೊಂದರೆ, ಅವಘಡ ಸಂಭವಿಸಿದಾಗ ಈ ಜಲ ಮಾರ್ಗ ಒಂದು ರೀತಿಯ ಸಂಪರ್ಕ ವ್ಯವಸ್ಥೆಯಾಗಲಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ (ಪ್ರಭಾರ) ಕೆ. ಕೀರ್ತಿಕುಮಾರ್‌, ಪರಿಸರ ಅಧಿಕಾರಿ ಡಾ. ಲಕ್ಷ್ಮೀಕಾಂತ ಎಚ್‌. ಇದ್ದರು.