ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತ್ರಿಪದಿ ವಚನಕಾರ ಸರ್ವಜ್ಞ ಸಮಾಜದ ಅವ್ಯವಸ್ಥೆ ಸುಧಾರಿಸಲು ವಚನಗಳ ಮೂಲಕ ಸಾರಿದ ತತ್ವ ಸಿದ್ಧಾಂತಗಳು ಪ್ರಸಕ್ತ ಸಂದರ್ಭದಲ್ಲಿ ಯುವ ಪೀಳಿಗೆಗೆ ತಿಳಿಸಿ ಹೇಳುವ ಅಗತ್ಯವಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.ನಗರದ ಹೊರವಲಯದ ತಾಲ್ಲೂಕು ಆಡಳಿತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರಿಪದಕವಿ ಸರ್ವಜ್ಞ ಜಯಂತಿಯಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸರ್ವಜ್ಞ ರು 17ನೇ ಶತಮಾನದ ಆರಂಭದಲ್ಲಿ ಹಾವೇರಿ ಜಿಲ್ಲೆಯ ಅಂಬಲೂರು ಮಾಸೂರು ಎಂಬ ಪುಟ್ಟ ಗ್ರಾಮ ಜನಿಸಿ ವಚನಕಾರರಾಗಿ ಅಸಮಾನತೆ ವಿರುದ್ಧ ವಚನಗಳ ಮೂಲಕ ಜನತೆಯನ್ನು ಎಚ್ಚರಿಸುವ ಕಾಯಕ ಮಾಡಿದರು ಎಂದರು.
ಶ್ರೇಷ್ಠ ದಾರ್ಶನಿಕ ಸರ್ವಜ್ಞಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವನು, ಎಲ್ಲಾ ವಿಚಾರದಲ್ಲೂ ಪಾಂಡಿತ್ಯ ಪಡೆದವರೆಂದು ಅರ್ಥ ಹೆಸರಿನ ಅಂಕಿತ ಬಳಸಿಕೊಂಡು ವಚನಗಳನ್ನು ರಚಿಸಿದ ಸರ್ವಜ್ಞರು, ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಪಂಪ, ರನ್ನ, ಜನ್ನ, ಪೊನ್ನ ಇವರೆಲ್ಲಾ ಸಾಹಿತಿಗಳು ಸಂಸ್ಕೃತ ಅಧ್ಯಯನ ಮಾಡಿದ ಪಂಡಿತರಾದರೆ, ಸರ್ವಜ್ಞರು ಅಪ್ಪಟ ಕನ್ನಡದ ಕವಿ ಎಂದು ತಿಳಿಸಿದರು. ಸರ್ವಜ್ಞರು ಅದ್ಭುತವಾದ ಸಂದೇಶಗಳನ್ನ ಅಪ್ಪಟ ಕನ್ನಡದಲ್ಲೇ ತ್ರಿಪದಿಗಳಲ್ಲೇ ಕಟ್ಟಿಕೊಟ್ಟರು. ಅಲ್ಲದೇ ಯಾವ ವಿಷಯ ಬಿಡದೇ ಎಲ್ಲ ಸಂಗತಿಗಳ ಕುರಿತು ವಚನ ರಚಿಸಿದ ಅವರನ್ನು ಇದೇ ಕಾರಣಕ್ಕೆ ಆಡು ತಿನ್ನದ ಸೊಪ್ಪಿಲ್ಲ, ಸರ್ವಜ್ಞರು ಹೇಳದ ವಿಷಯಗಳಿಲ್ಲ ಎಂದು ಹೇಳುತ್ತಾರೆ. ಒಂದು ತುಂಡು ಬಟ್ಟೆಯನ್ನುಟ್ಟು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದ ಸರ್ವಜ್ಞರು ಇತಿಹಾಸದ ಸಾಹಿತ್ಯದಲ್ಲಿ ಲೋಕಜ್ಞಾನ ಬೆಳೆಸಿದವರು. ಅರಿಷಡ್ವರ್ಗಗಳನ್ನು ಮೀರಿದ ಈ ಶರಣ ಸಮಾಜಕ್ಕೆ ಬೆಳಕು ಚೆಲ್ಲಿದ ಮಹಾತ್ಮ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾ ಸ್ವಾಮೀಜಿಗಳು,ತಾಲ್ಲೂಕು ಆಡಳಿತದ ಅಧಿಕಾರಿ ಮಹೇಶ್.ಎಸ್.ಪತ್ರಿ, ಮತ್ತು ಸಿಬ್ಬಂಧಿವರ್ಗದವರು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ, ಕುಂಬಾರ ಸಮುದಾಯದ ಪ್ರಮುಖ ಬಂಧುಗಳು ಕೆ.ಎಚ್.ಪಿ.ಬಣದ ಮುಖಂಡರುಗಳು ಮತ್ತು ಸಾರ್ವಜನಿಕರು ಹಾಜರಿದ್ದರು.