ಸಾರಾಂಶ
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡದಲ್ಲಿ ಕಾಂಗ್ರೆಸ್ ವೀಕ್ ಆಗಿದೆ. ಅದನ್ನು ಕಾರ್ಯಕರ್ತರು ಹಾಗೂ ಮುಖಂಡರು ಈ ಬಾರಿ ಸರಿಪಡಿಸಿ, ನನ್ನ ಮಗಳನ್ನು ಗೆಲ್ಲಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಭಾನುವಾರ ರಾತ್ರಿ ಪುರಸಭೆ ಮಾಜಿ ಅಧ್ಯಕ್ಷೆ ಯಲ್ಲವ್ವ ಗೌಡ್ರ ಅವರ ನಿವಾಸದ ಬಯಲಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಸವನ ಬಾಗೇವಾಡಿ ಕೇತ್ರದಲ್ಲಿ ಆರ್‌ಎಸ್‌ಎಸ್ ಪ್ರಾಬಲ್ಯವಿದ್ದರೂ ನಾನು ಗೆದ್ದು ಬರುತ್ತೇನೆ. ಗುಳೇದಗುಡ್ಡದಲ್ಲಿ ಆರ್‌ಎಸ್ಎಸ್ ಪ್ರಾಬಲ್ಯ ಹೆಚ್ಚಿದೆ. ಆದರೆ, ಕಾಂಗ್ರೆಸ್ ಮಾತ್ರ ತುಂಬಾ ವೀಕ್ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾದಾಮಿ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯ, ರಾಜು ಚಿಮ್ಮನಕಟ್ಟಿ ಸ್ಪರ್ಧಿಸಿದಾಗಲೂ ಗುಳೇದಗುಡ್ಡದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಮತ ಲಭಿಸಿದೆ. ಆದರೆ, ಈ ಬಾರಿ ಹಾಗೆ ಆಗದಂತೆ ಎಲ್ಲರೂ ನೋಡಿಕೊಳ್ಳಬೇಕು. ನನ್ನ ಮಗಳನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ತಮ್ಮ ಮೇಲಿದೆ. ದೇಶದಲ್ಲಿಯೇ ನಮ್ಮದು ಮಾದರಿ ಸರ್ಕಾರ. ನುಡಿದಂತೆ ನಡೆದ ಸರ್ಕಾರ. ನಾನು ಆರೋಗ್ಯ ಸಚಿವನಾಗಿದ್ದಾಗ ತಮ್ಮ ಊರಿಗೆ ನೂರು ಹಾಸಿಗೆ ತಾಯಿ ಮಗುವಿನ ಆಸ್ಪತ್ರೆ ಮಂಜೂರು ಮಾಡಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಗುಳೇದಗುಡ್ದಲ್ಲಿ ಜವಳಿಪಾರ್ಕ ಮಾಡುತ್ತೇನೆ ಎಂದು ಭರವಸೆ ನೀಡಿದರು.ಬಾದಾಮಿ ಮತಕ್ಷೇತ್ರದ ಬಿ.ಬಿ.ಚಿಮ್ಮನಕಟ್ಟಿ ಅತ್ಯಂತ ಹಿರಿಯ ಮುತ್ಸದ್ಧಿ ರಾಜಕಾರಣಿ. ಮತಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ಮಗ ರಾಜು ಕೂಡ ಜನಪರ ಕಾಳಜಿ ಹೊಂದಿರುವ ಶಾಸಕ. ಅವರ ಜೊತೆ ನಾನೂ ಇರುತ್ತೇನೆ. ಮತಕ್ಷೇತ್ರಕ್ಕೆ ನನ್ನ ಇಲಾಖೆಯಿಂದ ಸಿಗುವ ಸೌಲಭ್ಯ ನೀಡುತ್ತೇನೆ. ನನ್ನ ಮಗಳನ್ನು ಬಹುಮತಗಳ ಅಂತರದಿಂದ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಸಚಿವ ಶಿವಾನಂದ ಪಾಟೀಲ ಅವರು ನಮಗೆ ಬಲಗೈ ಇದ್ದಹಾಗೆ. ನಮ್ಮ ಯಾವುದೇ ಜನಪರ ಕೆಲಸಗಳಿಗೆ ಸ್ಪಂದಿಸುತ್ತಾರೆ. ಕಾಂಗ್ರೆಸ್ ಅವರ ಮಗಳಿಗೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದೆ. ಎಲ್ಲ ಕಾರ್ಯಕರ್ತರು, ಮುಖಂಡರು ಹಗಲು ರಾತ್ರಿಯೆನ್ನದೇ ಅವರ ಗೆಲುವಿಗೆ ದುಡಿಯೋಣ ಎಂದು ಹೇಳಿದರು.ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ, ಪ್ರಕಾಶ ಮುರಗೋಡ, ಡಾ.ಬಸವರಾಜ ಕೋಲಾರ, ರಾಜು ಸಂಗಮ, ವಿನೋದ ಮದ್ದಾನಿ, ಪುರಸಭೆ ಮಾಜಿ ಅಧ್ಯಕ್ಷ ಭುವನೇಶ್ವರಿ ಹಾದಿಮನಿ, ಯಲ್ಲವ್ವ ಗೌಡ್ರ, ವೈ.ಆರ್. ಹೆಬ್ಬಳ್ಳಿ, ಎಂ.ಎಂ.ಜಮಖಾನಿ, ರಾಜು ಜವಳಿ, ಪ್ರಕಾಶ ಮೇಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರು ಇದ್ದರು. ಕೋಟ್...
ನನ್ನ ಮಗಳನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ತಮ್ಮ ಮೇಲಿದೆ. ಬಾದಾಮಿ ಮತಕ್ಷೇತ್ರಕ್ಕೆ ನನ್ನ ಇಲಾಖೆಯಿಂದ ಸಿಗುವ ಸೌಲಭ್ಯ ನೀಡುತ್ತೇನೆ. ನನ್ನ ಮಗಳನ್ನು ಬಹುಮತಗಳ ಅಂತರದಿಂದ ಆಶೀರ್ವಾದ ಮಾಡಿ ಗೆಲ್ಲಿಸಿ.ಶಿವಾನಂದ ಪಾಟೀಲ. ಸಚಿವರು