ಸಾರಾಂಶ
ಶ್ರೀರಂಗಪಟ್ಟಣ : ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದ ನಮ್ಮ ನೀರು, ನಮ್ಮ ಹಕ್ಕು ಕೇವಲ ಚುನಾವಣೆ ಘೋಷಣೆಗೆ ಸೀಮಿತವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪಟ್ಟಣದಲ್ಲಿನ ಮೈಸೂರು ಚಲೋ ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ನಾಯಕರು, ಇಂಡಿಯಾ ಕೂಟದ ಭಾಗವಾಗಿರುವ ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರನ್ನು ಒಪ್ಪಿಸಿ ಮೇಕೆದಾಟು ಯೋಜನೆ ಆರಂಭಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮೇಕೆದಾಟು ವಿಷಯವಾಗಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರ ಬಳಿ ಸೌಹಾರ್ದ ಚರ್ಚೆ ನಡೆಸಿ ನಾನು ಬರುತ್ತೇನೆ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ದೂರಿದರು.
ಅಣೆಕಟ್ಟೆಯಿಂದ ಲಕ್ಷಾಂತರ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದಿದೆ. ಮೆಟ್ಟೂರು ಡ್ಯಾಂ ತುಂಬಿ ಹೆಚ್ಚಿನ ನೀರು ಯಾವುದಕ್ಕೂ ಪ್ರಯೋಜನವಾಗದೇ ಸಮುದ್ರ ಸೇರುತ್ತಿದೆ. ಈಗಲಾದರೂ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರನ್ನು ಒಪ್ಪಿಸಿದ್ದಲ್ಲಿ ಸ್ವತಃ ಕುಮಾರಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಯೋಜನೆ ಅನುಷ್ಠಾನಗೊಳಿಸಲಿದ್ದಾರೆ ಎಂದು ಹೇಳಿದರು.