ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಕಾರ್ಯ ಶ್ಲಾಘನೀಯ

| Published : Feb 10 2024, 01:45 AM IST

ಸಾರಾಂಶ

ಪ್ರತಿವರ್ಷ ಕೋಟೆಯಲ್ಲಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ರಂಗಭೂಮಿ ಅಭಿರುಚಿ ಹೆಚ್ಚಿಸಲಾಗುತ್ತಿದೆ. ಇವರ ಕಾರ್ಯ ಈ ಭಾಗದಲ್ಲಿ ರಂಗಭೂಮಿಗೆ ಶ್ರಮಿಸಿದಂತ ಅನೇಕ ಹಿರಿಯ ಕಲಾವಿದರಿಗೆ ಗೌರವ ನೀಡಿದೆ

ಕನ್ನಡಪ್ರಭ ವಾರ್ತೆ ಸವದತ್ತಿ

ರಂಗಭೂಮಿ ಕಲೆಯನ್ನು ಜನಮಾನಸದಲ್ಲಿ ಉಳಿಯುವಂತೆ ನಿರಂತರವಾಗಿ ಶ್ರಮಿಸುತ್ತಿರುವ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಕಾರ್ಯ ಶ್ಲಾಘನೀಯ. ಪ್ರತಿವರ್ಷ ಪರಸಗಡ ನಾಟಕೋತ್ಸವದಲ್ಲಿ ನಾಡೋಜ ಏಣಗಿ ಬಾಳಪ್ಪನವರ ಸ್ಮರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹಿರಿಯ ನ್ಯಾಯವಾದಿ ಮೋಹನ ಏಣಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ದೇಸಾಯಿ ಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಸವದತ್ತಿ ಸಂಯುಕ್ತ ಆಶ್ರಯದಲ್ಲಿ ನಡೆದ 27ನೇ ಪರಸಗಡ ನಾಟಕೋತ್ಸವ - 2024ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ಕೋಟೆಯಲ್ಲಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ರಂಗಭೂಮಿ ಅಭಿರುಚಿ ಹೆಚ್ಚಿಸಲಾಗುತ್ತಿದೆ. ಇವರ ಕಾರ್ಯ ಈ ಭಾಗದಲ್ಲಿ ರಂಗಭೂಮಿಗೆ ಶ್ರಮಿಸಿದಂತ ಅನೇಕ ಹಿರಿಯ ಕಲಾವಿದರಿಗೆ ಗೌರವ ನೀಡಿದೆ ಎಂದರು.

ಸಂಸ್ಥೆಯ ಗೌರವಾಧ್ಯಕ್ಷ ಝಕೀರ ನದಾಫ ಪ್ರಾಸ್ತಾವಿಕವಾಗಿ ಮಾತನಾಡಿ, ನಾಟ್ಯ ಭೂಷಣ ಏಣಗಿ ಬಾಳಪ್ಪನವರ ಕುರಿತು ಸರ್ಕಾರ ಅನೇಕ ಭರವಸೆಗಳನ್ನು ನೀಡುತ್ತ ಬಂದಿದ್ದು, ಅವುಗಳು ಇದುವರೆಗೆ ಕಾರ್ಯಗತವಾಗದೆ ಇರುವುದು ವಿಷಾದನೀಯ ಎಂದರು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಏಣಗಿ ಬಾಳಪ್ಪನವರ ಹೆಸರಿನಲ್ಲಿ ರಂಗಮಂದಿರಗಳನ್ನು ನಿರ್ಮಿಸಿ ಅವರ ಹೆಸರು ಸ್ಥಿರವಾಗಿ ಉಳಿಯುವಂತೆ ಸರ್ಕಾರ ಕಾರ್ಯೋನ್ಮುಖವಾಗಬೇಕೆಂದು ಮನವಿ ಮಾಡಿದರು.

27ನೇ ಪರಸಗಡ ನಾಟಕೋತ್ಸವದ ಅಂಗವಾಗಿ ದೇವಸೂರ, ಹುಚ್ಚರ ಸಂತೆ, ಜೊತೆಗಿರುವನು ಚಂದಿರ, ತಾಳಿಯ ತಕರಾರು, ಕಲ್ಯಾಣದ ಬಾಗಿಲು, ದೇವರ ಹೆಣ, ಈಸಕ್ಕಿಯ ಆಸೆ, ಕಾದು ಕಥೆಯಾದವರು, ದ್ರೌಪದಿ ಹೇಳ್ತಾವ್ಳೆ 9 ನಾಟಕಗಳು ಪ್ರದರ್ಶನಗೊಂಡವು.

ರಂಗಭೂಮಿಯ ಹೆಸರಾಂತ ನಿರ್ದೇಶಕ ಕಲ್ಲಪ್ಪ ಪೂಜಾರ ಹಾಗೂ ಬೆಂಗಳೂರಿನ ರಂಗಾಸ್ತೆ ತಂಡದ ಪ್ರಮುಖ ಧನುಶ್‌ ಅವರನ್ನು ಸತ್ಕರಿಸಲಾಯಿತು. ಸಂಸ್ಥೆಯ ಪೋಷಕ ಪಲ್ಲವಿ ಪಾಟೀಲ ಪದಕಿ, ಡಾ.ಸವಿತಾ ಸಬನೀಸ, ಬಸವರಾಜ ಪುರದಗುಡಿ, ಗಿರೀಶ ಮುನವಳ್ಳಿ ಇದ್ದರು. ಕೊನೆಯ ದಿನ ನಾಡೋಜ ನಾಟ್ಯಭೂಷಣ ಏಣಗಿ ಬಾಳಪ್ಪನವರ ಸ್ಮರಣಾರ್ಥ ಏರ್ಪಡಿಸಿದ್ದ ದ್ರೌಪದಿ ಹೇಳ್ತಾವ್ಳೆ ನಾಟಕ ಪ್ರದರ್ಶನಗೊಂಡಿತು. ಮಯೂರ್ ಶಿಂಧೆ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಗದಗ ವಂದಿಸಿದರು.