ಸಾರಾಂಶ
ಜನರ ಕಲ್ಯಾಣಕ್ಕಾಗಿ ಜಾರಿ ಮಾಡುವ ಸರ್ಕಾರದ ಯೋಜನೆಗಳ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಇಂಡಿ
ಜನರ ಕಲ್ಯಾಣಕ್ಕಾಗಿ ಜಾರಿ ಮಾಡುವ ಸರ್ಕಾರದ ಯೋಜನೆಗಳ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ದಿವಾನಿ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಈಶ್ವರ ಎಸ್.ಎಂ.ಸೂಚಿಸಿದರು. ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬೃಹತ್ ಪಿಂಚಣಿ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸಿ ಅಬೀದ್ ಗದ್ಯಾಳ ಮಾತನಾಡಿ, ಪಿಂಚಣಿ ಎಂದರೆ ಜನರಿಗೆ ಭದ್ರತೆ ಒದಗಿಸುವುದು. ವಿಕಲಚೇತನರಿಗೆ, ವಿಧವೆಯರಿಗೆ, ಹಿರಿಯರಿಗೆ, ರೈತ ಮಹಿಳೆಯರಿಗೆ ಮಾಸಾಶನ ನೀಡಿ ಅವರಿಗೆ ಭದ್ರತೆ ಒದಗಿಸುತ್ತದೆ. ಅದೇ ರೀತಿ ಪಿಂಚಣಿಯಲ್ಲಿ ಯಾರಿಗಾದರೂ ತೊಂದರೆಯಾದರೆ ಅದನ್ನು ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ. ಸರ್ಕಾರವೇ ಜನರ ಬಳಿ ಹೋಗಿ ಅವರ ಸಂಕಷ್ಟಗಳನ್ನು ಆಲಿಸಿ, ಅವರಿಗೆ ಭದ್ರತೆ ಒದಗಿಸುವ ಕಾರ್ಯಕ್ರಮವೆ ಪಿಂಚಣಿ ಅದಾಲತ್. ಇದರ ಸದುಪಯೋಗ ಪಡೆಯಿರಿ ಎಂದರು. ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಮಾತನಾಡಿ, ಪಿಂಚಣಿ ಅದಾಲತ್ ಪ್ರತಿ ತಿಂಗಳು ಕೊನೆಯ ಶನಿವಾರ ನಡೆಯುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡಯಿರಿ ಎಂದರು. ಸ್ಥಳದಲ್ಲಿಯೇ 30 ಜನರಿಗೆ ಪಿಂಚಣಿ ಆದೇಶ ನೀಡಲಾಯಿತು. ವೇದಿಕೆಯಲ್ಲಿ ತಾಲೂಕು ಪಂಚಾಯತಿ ಇಒ ಬಾಬುರಾವ್ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಗ್ರೇಡ-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ, ವಕೀಲರ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಬಿರಾದಾರ, ವಕೀಲ ಡಿ.ಎಸ್.ಮಡಿವಾಳಕರ, ಸಹಾಯಕ ಸರ್ಕಾರಿ ಅಭಿಯೋಜಕ ಐ.ಕೆ.ಗಚ್ಚಿನಮಹಲ ಇದ್ದರು.