ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಗೋಕಟ್ಟೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕ್ಷೇತ್ರದ 17 ಕಡೆ ಹೊಸದಾಗಿ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲೂಕಿನ ಮದ್ದೇರು ಗ್ರಾಮದಲ್ಲಿ 1 ಕೋಟಿ ರು. ವೆಚ್ಚದ ಗೋಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಚಿಕ್ಕಜಾಜೂರು, ಭರಮಸಾಗರ, ಚಿತ್ರಹಳ್ಳಿ ಸಮೀಪದ ವಿದ್ಯುತ್ ಕೇಂದ್ರಗಳ ಕಾಮಗಾರಿಗಳು ಭರದಿಂದ ಸಾಗಿವೆ. ಈ ಎಲ್ಲ ವಿದ್ಯುತ್ ಕೇಂದ್ರಗಳು ಪೂರ್ಣಗೊಂಡ ನಂತರ ರೈತರಿಗೆ ವಿದ್ಯುತ್ ತೊಂದರೆ ಇರುವುದಿಲ್ಲ. ಈಗ ಸಿಗುವುದಕ್ಕಿಂತ ಹೆಚ್ಚು ಅವಧಿಯ ವಿದ್ಯುತ್ ಅವರಿಗೆ ಲಭ್ಯವಾಗುತ್ತದೆ. ಅದರಿಂದ ಕೃಷಿ ಚಟುವಟಿಕೆಗಳು ವಿಸ್ತಾರಗೊಳ್ಳುತ್ತವೆ ಎಂದರು.ರೈತರ ಬದುಕು ಹಸನಾಗಬೇಕೆಂಬುದೇ ನನ್ನ ಉದ್ದೇಶ. ಆದ್ದರಿಂದಲೇ ರೈತರಿಗ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುತ್ತಿದ್ದೇನೆ. ಕೆರೆ ಕಟ್ಟೆಗಳ ನಿರ್ಮಾಣ, ಚೆಕ್ ಡ್ಯಾಂಗಳ ನಿರ್ಮಾಣ, ಗೋಕಟ್ಡೆಗಳ ಕಾಮಗಾರಿಗಳಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಕ್ಷೇತ್ರದಾದ್ಯಂತ ರಸ್ತೆ, ಶಿಕ್ಷಣ, ಆರೋಗ್ಯದ ವಿಚಾರಗಳಿಗೂ ಗಮನಕೊಟ್ಟು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನರೆಲ್ಲರಿಗೂ ಹಿತವಾಗುವಂತೆ ನಾನು ಕೆಲಸ ಮಾಡುತ್ತಿದ್ದೇನೆಂಬ ತೃಪ್ತಿ ಇದೆ. ಕ್ಷೇತ್ರದ ವ್ಯಾಪ್ತಿಗೆ ಬರುವ 493 ಹಳ್ಳಿಗಳಲ್ಲಿ ಯಾವುದನ್ನೂ ಕಡೆಗಣಿಸದೆ ಕೆಲಸ ನಿರ್ವಹಿಸಿರುವೆ ಎಂದರು.
ಹೊಳಲ್ಕೆರೆಯ ಚಿಕ್ಕಕೆರೆಯಲ್ಲಿ 130 ಕೋಟಿ ರು. ವೆಚ್ಚದ ಡ್ಯಾಂ ನಿರ್ಮಿಸಲಾಗಿದೆ. 367 ಕೋಟಿ ರು. ವೆಚ್ಚದಲ್ಲಿ ವಾಣಿವಿಲಾಸ ಅಣೆಕಟ್ಟೆಯಿಂದ ಕ್ಷೇತ್ರಕ್ಕೆ ಕುಡಿಯುವ ನೀರು ತರುವ ಯೋಜನೆಯ ಕೆಲಸ ನಡೆಯುತ್ತಿದೆ. ಭದ್ರಾ ಮೇಲ್ಡಂಡೆ ಯೋಜನೆಯಡಿಯಲ್ಲಿ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸವೂ ನಡೆಯುತ್ತಿದೆ ಎಂದು ಶಾಸಕರು ತಿಳಿಸಿದರು.ಕ್ಷೇತ್ರದ ಎಲ್ಲಡೆ ನಡೆಯುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ. ಇದುವರೆಗೆ ಎಲ್ಲೂ ದೋಷಗಳು ಕಂಡುಬಂದಿಲ್ಲ. ನಡೆಯುವ ಕಾಮಗಾರಿಗಳನ್ನು ಗ್ರಾಮಸ್ಥರು ಸಹ ವೀಕ್ಷಿಸಬಹುದು. ಯೋಜನೆಯನ್ನು ಜಾರಿಗೊಳಿಸುವ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಅಚ್ಚುಕಟ್ಟಾಗಿ ಕಾಮಗಾರಿ ನಿರ್ವಹಿಸಲು ಸೂಚಿಸಿರುವೆ ಎಂದರು.
ಗ್ರಾಪಂ ಅಧ್ಯಕ್ಷ ಯುವರಾಜ್, ಸದಸ್ಯರಾದ ರಂಗಸ್ವಾಮಿ, ಜಗದೀಶ್, ರವಿ, ದಾಸಯ್ಯನಹಟ್ಟಿ ರಮೇಶ್, ವೀರಣ್ಣ, ಸಿದ್ದಲಿಂಗಪ್ಪ, ಪರಮೇಶ್ವರಪ್ಪ, ದ್ಯಾಮಪ್ಪ, ತಿಪ್ಪೇಸ್ವಾಮಿ, ಜಯಪ್ಪ, ಚಂದ್ರು, ಸ್ವಾಮಿ ಹಾಗೂ ಗ್ರಾಮದ ಮುಖಂಡರು ಇದ್ದರು.