ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಜನವರಿ 14ರಿಂದ ೧7ರವರೆಗೆ ದೇವಾಲಯದ ಸಂಪ್ರದಾಯದಂತೆ ಜರುಗಲಿದ್ದು, ಮುಜರಾಯಿ ಇಲಾಖೆ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ಅರ್ಚಕ ವೃಂದ ಸಕಲ ಸಿದ್ಧತೆಯಲ್ಲಿ ತೊಡಗಿದೆ.ಜ.14ರಂದು ಗ್ರಾಮಸ್ಥರಿಂದ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 4ಕ್ಕೆ ತಿರುಕಲ್ಯಾಣೋತ್ಸವ, ರಾತ್ರಿ10ಕ್ಕೆ ರಂಗನಾಥ ಸ್ವಾಮಿಯ ಬೆಳ್ಳಿ ರಥೋತ್ಸವ ಜರುಗಲಿದೆ. ಜ.15 ರಂದು ಮುಂಜಾನೆ ಸುಪ್ರಭಾತ ಸೇವೆ ಬಳಿಕ ರಂಗನಾಥ ಸ್ವಾಮಿಯ ಮೂಲ ವಿಗ್ರಹಕ್ಕೆ ನಾನಾ ಅಭಿಷೇಕ ವಿವಿಧ ಅರ್ಚನೆಗಳು ನಂತರ ಮಧ್ಯಾಹ್ನ 12ಕ್ಕೆ ಕಂತೇನಳ್ಳಿ ಸುರೇಶ್ ಚಿಟ್ಟಿ ಮೇಳ ಕಲಾ ತಂಡದವರಿಂದ ಈಶ್ವರ, ವೀರಭದ್ರೇಶ್ವರ, ಭದ್ರಕಾಳಿ ನೃತ್ಯ ಪ್ರದರ್ಶನ, ಮಧ್ಯಾಹ್ನ1ಕ್ಕೆ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಬಳಿಕ ಪೊಂಗಲ್ ಸೇವೆ, ರಾತ್ರಿ ದೇವಾಲಯದ ಆವರಣದಲ್ಲಿ ರಾತ್ರಿ 8.30ಕ್ಕೆ ಕುರುಕ್ಷೇತ್ರ ಸುಂದರ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.
ದೊಡ್ಡ ರಥೋತ್ಸವ: ಜ.16ರ ಗುರುವಾರ ಮಧ್ಯಾಹ್ನ 2ಕ್ಕೆ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಭೂ ನೀಳ ಸಮೇತ ರಂಗನಾಥ ಸ್ವಾಮಿಯ ದೊಡ್ಡ ರಥೋತ್ಸವವು ಜರುಗಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಲಿದೆ.ಜ .17ರಂದು ಗ್ರಾಮಸ್ಥರು ಹಾಗೂ ಭಕ್ತವೃಂದದ ವತಿಯಿಂದ ರಾತ್ರಿ ಕೆಂಚಪ್ಪನವರ ಹರಿಸೇವೆಯೊಂದಿಗೆ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ವೈಭವ್ತವಾಗಿ ತೆರೆ ಬೀಳಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಅಲಂಕಾರ ಪ್ರಿಯವಾದ ರಂಗನಾಥ ಸ್ವಾಮಿಯ ಏಕಶಿಲಾ ವಿಗ್ರಹಕ್ಕೆ ಪ್ರತಿದಿನ ವಿಶೇಷತೋಮಾಲೆ ಅಲಂಕಾರ ಮಾಡಲಾಗುವುದು ಹಾಗೂ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವಾಲಯದ ಅಭಿವೃದ್ಧಿ ಸಮಿತಿ ವತಿಯಿಂದ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಹಮ್ಮಿಕೊಂಡಿರಲಾಗುತ್ತದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ತಿಳಿಸಿದೆ.