‘ರೈತರ ಆತ್ಮಹತ್ಯೆಗೆ ಬೆಲೆ, ಸಾಲನೀತಿಗಳೇ ಕಾರಣ’

| Published : Nov 07 2025, 01:45 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ರೈತ ಎಂ.ಬಿ.ಮಂಜೇಗೌಡರ ಆತ್ಮಹತ್ಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ನೀತಿ ಮತ್ತು ಸಾಲದ ನೀತಿಗಳೇ ಕಾರಣ. ಆದ ಕಾರಣ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಆತನ ಎಲ್ಲ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ರೈತ ಎಂ.ಬಿ.ಮಂಜೇಗೌಡರ ಆತ್ಮಹತ್ಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ನೀತಿ ಮತ್ತು ಸಾಲದ ನೀತಿಗಳೇ ಕಾರಣ. ಆದ ಕಾರಣ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಆತನ ಎಲ್ಲ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಪರಿಹಾರದ ರೂಪದಲ್ಲಿ ಜಮೀನು ನೀಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟಿಸಿದರು.

ರಾಜ್ಯ ರೈತ ಸಂಘ ಪ್ರತಿಭಟನೆ:

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ರೈತಸಂಘದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು.

ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ ೩,೫೦೦ ರು. ನಿಗದಿಪಡಿಸಬೇಕು. ಅದೇ ರೀತಿ ದಕ್ಷಿಣ ಕರ್ನಾಟಕ ಕಬ್ಬು ಬೆಳೆಗಾರರಿಗೆ ಟನ್ ಕಬ್ಬಿಗೆ ೫ ಸಾವಿರ ರು. ನಿಗದಿಮಾಡಬೇಕು. ಕಾಯಂ ಆಗಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ವರ್ಷ ಪೂರ್ತಿ ತೆರೆಯಬೇಕು. ಪಂಜಾಬ್ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ರೈತರ ಎಲ್ಲ ಭತ್ತವನ್ನು ಖರೀದಿಸಬೇಕು. ಈಗಾಗಲೇ ರಾಜ್ಯ ಆಹಾರ ನಿಗಮದಿಂದ ಖರೀದಿ ಮಾಡಲು ಪ್ರಕಟಿಸಿರುವುದನ್ನು ಕೈಬಿಟ್ಟು ಹಿಂದಿನಂತೆ ಮಿಲ್ ಪಾಯಿಂಟ್ ಮುಖಾಂತರ ಖರೀದಿಸುವಂತೆ ಒತ್ತಾಯಿಸಿದರು.

೧೫೦ ರು. ಬಾಕಿ ಹಣಕ್ಕೆ ಆಗ್ರಹ:

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಹಿಂದಿನ ಸರ್ಕಾರವು ಘೋಷಣೆ ಮಾಡಿದ್ದ ೧೫೦ ರು. ಬಾಕಿ ಹಣವನ್ನು ಕೊಡಿಸಲು ಸರ್ಕಾರ ಮುಂದಾಗಬೇಕು. ಪ್ರಸಕ್ತ ಸಾಲಿನಲ್ಲಿ ಸರಬರಾಜು ಮಾಡಿದ ಕಬ್ಬಿನ ಹಣವನ್ನು ಕೂಡಲೇ ಪಾವತಿಸುವಂತೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡುವುದು. ಮದ್ದೂರು ಸೋಮೇಶ್ವರ ಟ್ರೇಡರ್ಸ್‌ನಲ್ಲಿ ರಸಗೊಬ್ಬರದ ಕಲಬೆರಕೆ ಅವ್ಯವಹಾರದ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಿ, ಟ್ರೇಡರ್ಸ್‌ ಪರವಾನಗಿ ರದ್ದುಪಡಿಸುವುದರ ಜತೆಗೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ರೈತರ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಸರ್ಕಾರದಿಂದ ಸಿಗುವ ಸಾಮಾಜಿಕ ಯೋಜನೆಗಳಾದ ಕಿಸಾನ್ ಸಮ್ಮಾನ್, ಗೃಹಲಕ್ಷ್ಮೀ ಹಣ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಮುಂತಾದ ಸಹಾಯಧನವನ್ನು ಸಾಲಗಳಿಗೆ ಹೊಂದಾಣಿಕೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ಕರೆಯಬೇಕು. ಅಲ್ಲದೆ, ಚಿನ್ನಾಭರಣಗಳ ಸಾಲವನ್ನು ನವೀಕರಿಸಲು ಬಡ್ಡಿ ಮಾತ್ರ ಪಡೆದು ಸಾಲ ಮರು ನವೀಕರಿಸುವಂತೆ ಬ್ಯಾಂಕ್ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಲತಾ ಶಂಕರ್, ಲಿಂಗಪ್ಪಾಜಿ, ಎಂ.ಎಸ್.ವಿಜಯ್‌ಕುಮಾರ್, ಜಿ.ಎ.ಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.ಜಿಲ್ಲಾಧಿಕಾರಿ, ತಹಸಿಲ್ದಾರ್ ಅಮಾನತಿಗೆ ಕರವೇ ಆಗ್ರಹ

ರೈತ ಮಂಜೇಗೌಡ ಅವರ ಸಾವಿಗೆ ಕಾರಣರಾಗಿರುವ ಕೆ.ಆರ್.ಪೇಟೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಅವರನ್ನು ಅಮಾನತುಗೊಳಿಸಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿ, ಬಳಿಕೆ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಘೋಷಣೆ ಕೂಗಿದರು.

ಮಂಜೇಗೌಡ ಅವರು ತಾವು ವ್ಯವಸಾಯ ಮಾಡುತ್ತಿದ್ದ ಜಮೀನಿನ ದಾಖಲೆಗಳು ಸರಿಯಾಗದ ಕಾರಣ ಮನನೊಂದಿದ್ದರು. ಜಿಲ್ಲಾಧಿಕಾರಿ ಅವರ ಭೇಟಿಗಾಗಿ ಎರಡು ದಿನ ಕಾದು ಕುಳಿತಿದ್ದಾರೆ. ಆದರೆ ಮೂರನೇ ದಿನವೂ ಭೇಟಿಗೆ ಜಿಲ್ಲಾಧಿಕಾರಿ ನಿರಾಕರಿಸಿದ ಕಾರಣದಿಂದ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ಜಿಲ್ಲಾಧಿಕಾರಿ ನೇರ ಹೊಣೆ ಎಂದು ಆಪಾದಿಸಿದರು.

ರೈತರಿಗೆ ಯಾವುದೇ ಅನ್ಯಾಯ ಆಗದಂತೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು. ಕೃಷಿ ಸಚಿವರ ಜಿಲ್ಲೆಯಲ್ಲಿಯೇ ಇಂತಹ ಘಟನೆ ನಡೆದಿರುವುದು ವಿಪರ್ಯಾಸ. ಮೃತರ ಕುಟುಂಬಕ್ಕೆ ೨೫ ಲಕ್ಷ ರು.ಪರಿಹಾರ ನೀಡಬೇಕು. ಜೊತೆಗೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾ ಘಟಕ ಅಧ್ಯಕ್ಷ ಡಿ.ಎಸ್.ವೇಣು, ಮುಖಂಡರಾದ ರಾಮಚಂದ್ರೇಗೌಡ, ಕೆ.ಟಿ.ಶಂಕರೇಗೌಡ, ಜಿ.ಜಿ.ಹರೀಶ್‌ಗೌಡ, ಸುಜಾತಾ ಕೃಷ್ಣ, ತೇಜುಕುಮಾರ್, ಭಾರತಿ ಕುಮಾರ್, ನಂದಿನಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.