ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಆಲೂರು ತಾಲೂಕು, ಹೊಸಮಠ ಗ್ರಾಮದ ಸರ್ವೆ ನಂಬರ್ ೧೫೧ರಲ್ಲಿ ಕ್ರೈಸ್ತರ ಪವಿತ್ರ ತೀರ್ಥಸ್ಥಳವಾದ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು, ಕ್ರೈಸ್ತ ಧರ್ಮಗುರುಗಳು ಹಾಗೂ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹಸು, ಕುರಿ ಜೊತೆ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಇದೇ ವೇಳೆ ಜಯಬಸವಾನಂದ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ಗಣಿಗಾರಿಕೆ ಸ್ಫೋಟದಿಂದ ಸುತ್ತಮುತ್ತಲಿನ ಮನೆಗಳಲ್ಲಿ ಬಿರುಕು ಉಂಟಾಗಿದ್ದು, ಭಾರಿ ವಾಹನ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಶಾಲಾ ಬಸ್ಸುಗಳು ಹಾಳಾದ ರಸ್ತೆಯಿಂದ ಸಂಚಾರ ನಿರಾಕರಿಸಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿದೆ. ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಧೂಳು ಹೊಲಗಳಿಗೆ ಹರಿದು ಕಾಫಿ, ಮೆಣಸು, ಭತ್ತದ ಬೆಳೆ ಹಾನಿಯಾಗುತ್ತಿದೆ. ಹೊಸಮಠ, ಕಲ್ಲುಕೊಪ್ಪಲು, ಮಟದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು, ದಿಣ್ಣೆಕೊಪ್ಪಲು ಮುಂತಾದ ಹಳ್ಳಿಗಳ ಜನತೆ "ಗಣಿಗಾರಿಕೆ ನಿಲ್ಲಿಸಬೇಕು " ಎಂದು ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದಾರೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ಆಲೂರು ತಾಲೂಕು, ಹೊಸಮಠ ಗ್ರಾಮದ ಸರ್ವೆ ನಂಬರ್ ೧೫೧ರಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿತ್ತು. ಗ್ರಾಮದಲ್ಲಿ ಲಿಂಗಾಯಿತರು ಈ ಗ್ರಾಮದ ಸುತ್ತಮುತ್ತ ಕ್ರೈಸ್ತ ಜನಾಂಗದವರು ಇದ್ದೇವೆ. ಶಿಲುಬೆ ಬೆಟ್ಟ ಕೈಸ್ತರ ಧಾರ್ಮಿಕ ಕೇಂದ್ರವಾಗಿದ್ದು, ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ಮಾಡುವುದರಿಂದ ಅಕ್ರಮ ಬ್ಲಾಸ್ಟಿಂಗ್‌ದಿಂದ ಮನೆಗಳು ಬಿರುಕು ಬಿಟ್ಟಿದ್ದು ಮನೆಗಳಲ್ಲಿ ವಾಸ ಮಾಡಲು ಹಾಗೂ ವ್ಯವಸಾಯ ಮಾಡಲು ಸಹ ತೊಂದರೆ ಆಗುತ್ತಿದೆ. ಇದು ಕಾಡಾನೆ ಸಂಚರಿಸುವ ಜಾಗವಾಗಿದೆ ಎಂದರು.ಮುಖ್ಯವಾಗಿ ವ್ಯವಸಾಯದ ಜಮೀಗೆ ಕಲುಶಿತ ಗಣಿಗಾರಿಕೆಯ ನೀರು ನುಗ್ಗುತ್ತಿದ್ದು, ಆದ್ದರಿಂದ ಪ್ರತಿಭಟನೆ ಮಾಡುತ್ತಿದ್ದರೂ ಹಲವಾರು ಜನರು ಗಣಿಗಾರಿಕೆಯ ಪ್ರಕರಣವನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬೋವಿ ಸಮಾಜದ ಜನರು ಕೂಡ ಕನ್ನಡ ಬಂಧುಗಳು ಆದರೆ ಬೋವಿ ಸಮುದಾಯದ ಜಾತಿ ನಿಂದನೆ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್.ಪಿ ಕೆಚೇರಿಗೆ ದೂರು ನೀಡಿರುವುದು ಸೂಕ್ತವಾದದ್ದಲ್ಲ. ಗಣಿಗಾರಿಕೆ ಬಂದ್ ಆಗಿದ್ದರಿಂದ ಎಲ್ಲಾ ಗ್ರಾಮಗಳಿಗೂ ಹಾಗೂ ಎಲ್ಲಾ ಜನಾಂಗಗಳಿಗೂ ಅನುಕೂಲ ಆಗಿದೆ. ಆದರೆ ಮತ್ತೆ ಆರಂಭಿಸಲು ಪಿತೂರಿ ನಡೆಯುತ್ತಿದೆ ಎಂದು ದೂರಿದರು. ಕೂಡಲೇ ಸಲ್ಲಿಸಿರುವ ದೂರನ್ನು ವಾಪಸ್ ಪಡೆಯಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.ಪ್ರತಿಭಟನೆಯಲ್ಲಿ ಮಗ್ಗೆ ಚರ್ಚ್ ಧರ್ಮಗುರು ಫಾದರ್ ಪ್ರಶಾಂತ್, ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ಒಕ್ಕಲಿಗರ ಸಂಘದ ರಾಜೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಗಿರೀಶ್, ತಾಲೂಕು ಅಧ್ಯಕ್ಷ ಎಚ್.ಕೆ. ದಿನೇಶ್, ಉಪಾಧ್ಯಕ್ಷ ವೆಂಕಟೇಶ್ ಗೌಡ, ಅರುಣ್ ಭಾಸ್ಕರ್, ಅಶೋಕ್, ಪುನೀತ್, ಜ್ಯೋತಿ, ಪುಷ್ಪ ಇತರರು ಉಪಸ್ಥಿತರಿದ್ದರು.