ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ಕಳೆದ ಎರಡು ವರ್ಷಗಳಿಂದಲೂ ಅಧ್ಯಕ್ಷರ ನೇಮಕ ಮಾಡಿಲ್ಲ. ಕೂಡಲೇ ಇತ್ತ ಗಮನಹರಿಸಿ ಸ್ಥಳೀಯರಿಗೆ ಅವಕಾಶ ನೀಡಿ ನೇಮಿಸಬೇಕು. ಇಲ್ಲವಾದರೇ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುವುದಾಗಿ ಕಾಂಗ್ರೆಸ್ ಮುಖಂಡ ನವೀದ್ ಅಹಮದ್ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ಕಾಂಗ್ರೆಸ್ ಸರ್ಕಾರ ಬಂದು ೨ ವರ್ಷದಿಂದ ಅಧ್ಯಕ್ಷರನ್ನು ನೇಮಕ ಮಾಡಿರುವುದಿಲ್ಲ. ಇತ್ತೀಚಿನ ದಿನಗಳ ಪತ್ರಿಕೆಗಳಲ್ಲಿ ಅರಸೀಕೆರೆಯ ವ್ಯಕ್ತಿಯೊಬ್ಬರಿಗೆ ಅಧ್ಯಕ್ಷ ಸ್ಥಾನವನ್ನು ಕೊಡುತ್ತಾರೆಂದು ವರದಿಯಾಗಿರುತ್ತದೆ. ನಮ್ಮ ಬೇಡಿಕೆ ಹಾಸನದ ನಗರಾಭಿವೃದ್ಧಿ ಪ್ರಾಧಿಕಾರವು ಹಾಸನ ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಅದರಲ್ಲೂ ಕೂಡ ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ಹಾಸನ ಸುತ್ತಮುತ್ತ ೩ ರಿಂದ ೪ ಕಿ.ಮೀ. ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರ ಪ್ರದೇಶಕ್ಕೆ ಒಳಪಡುವಂತಹ ಅವರನ್ನೇ ನೇಮಕ ಮಾಡಬೇಕೆಂದು ನಮ್ಮ ಒತ್ತಾಯ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲೆಯಲ್ಲಿ ೭ ವಿಧಾನಸಭಾ ಕ್ಷೇತ್ರವಿದ್ದು, ಅದರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದವರನ್ನೇ ಮಾಡಬೇಕೆಂಬುದು ನಮ್ಮ ಒತ್ತಾಯ. ಇವರನ್ನು ಬಿಟ್ಟು ಬೇರೆ ೬ ಕ್ಷೇತ್ರದ ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡಿದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುವುದಿಲ್ಲ. ಪಕ್ಷ ಸಂಘಟನೆ ಆಗಬೇಕಾದರೆ ಹಾಸನ ಕ್ಷೇತ್ರದ ಕಾರ್ಯಕರ್ತರು ಅಥವಾ ಮುಖಂಡರನ್ನು ನೇಮಕ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಲೋಕಸಭಾ ಸದಸ್ಯರಿಗೆ ಹಾಗೂ ಅರಸೀಕೆರೆ ಶಾಸಕರಾದ ಕೆ.ಎಂ ಶಿವಲಿಂಗೇಗೌಡರಿಗೆ ಮನವರಿಕೆ ಕೂಡ ಮಾಡಿಕೊಟ್ಟಿದ್ದೇವೆ. ಇವರೆಲ್ಲರೂ ನಮ್ಮ ಕೂಡ ಸ್ಥಳೀಯರಿಗೆ ಅಧ್ಯಕ್ಷ ಸ್ಥಾನವನ್ನು ಕೊಡತ್ತೆವೆಂದು ವಾಗ್ದಾನ ನೀಡಿರುತ್ತಾರೆ. ಆದರೂ ಕೂಡ ಇತ್ತೀಚಿನ ದಿನಗಳ ಪತ್ರಿಕೆಯಲ್ಲಿ ಅರಸೀಕೆರೆ ಕ್ಷೇತ್ರದ ಶಿವಪ್ಪ, ಚನ್ನರಾಯಪಟ್ಟಣದ ಶಂಕರ್, ಅರಕಲಗೂಡಿನ ವ್ಯಕ್ತಿ ಹಾಗೂ ಇತರರ ಹೆಸರುಗಳು ಕೇಳಿಬರುತ್ತಿದೆ. ಹಾಸನ ಕ್ಷೇತ್ರದಲ್ಲಿ ೨೮೦ ಬೂತ್‌ಗಳಿದ್ದು, ಸದರಿ ಬೂತ್‌ನ ಕಾರ್ಯಕರ್ತರಾಗಲಿ, ಮುಖಂಡರಾಗಲಿ, ಜನಗಳಿಗಾಗಲಿ ಯಾರೊಬ್ಬರಿಗೂ ಕೂಡ ಪರಿಚಯವಿರುವುದಿಲ್ಲ. ಆದ್ದರಿಂದ ಬೇರೆ ಕ್ಷೇತ್ರದವರನ್ನು ನಮ್ಮ ಮೇಲೆ ತಂದು ಹೇರುವ ಒತ್ತಡ ಮಾಡಬೇಡಿ ಎಂದು ಮನವಿ ಮಾಡಿದರು. ದಯಮಾಡಿ ನಿಮಗೆ ಮನವಿ ಮಾಡುವುದೇನೆಂದರೆ ಒಂದು ವೇಳೆ ಬೇರೆ ಕ್ಷೇತ್ರದವರನ್ನು ಆಯ್ಕೆ ಮಾಡಿದ್ದಲ್ಲಿ ನಮ್ಮ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಎಲ್ಲಾ ಸೇರಿ ಪ್ರತಿಭಟನೆಯನ್ನು ಕೂಡ ಮಾಡುತ್ತೇವೆ. ಮುಂದಿನ ಜವಾಬ್ದಾರಿಯನ್ನು ತಾವುಗಳೇ ಹೊರಬೇಕಾಗುತ್ತದೆ. ದಯಮಾಡಿ ಮೊತ್ತೊಮೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಲೋಕಸಭಾ ಸದಸ್ಯರಿಗೆ ಹಾಗೂ ಅರಸೀಕೆರೆ ಶಾಸಕರಾದ ಕೆ.ಎಂ ಶಿವಲಿಂಗೇಗೌಡರಿಗೆ ವಿನಯಪೂರ್ವಕ ಮನವಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ವಿಭಾಗದ ವಿನೋದ್ ಕುಮಾರ್, ಯುವ ಕಾಂಗ್ರೆಸ್ ಮುಖಂಡ ಅಗಿಲೆ ಗುರು, ನಗರಸಭೆ ಮಾಜಿ ಸದಸ್ಯ ಆರೀಫ್ ಖಾನ್, ಮುಖಂಡ ನಯಾಜ್, ಆಲ್ವಿನ್ ಇತರರು ಉಪಸ್ಥಿತರಿದ್ದರು.