‘ಬರ’ದ ನೆರಳಿನಲ್ಲಿ ಕಂಗಾಲಾಗಿದ್ದ ಜಗಳೂರು ತಾಲೂಕಿನ ಭೂಮಿಗೆ ‘ಪುಷ್ಯ’ ಮಳೆ ತಂಪೆರೆದಿದ್ದು, ಸತತ ಮಳೆಯಿಲ್ಲದೇ ಕಂಗೆಟ್ಟಿದ್ದ ಅನ್ನದಾತರ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದೆ. ಸೋಮವಾರ ಮಧ್ಯಾಹ್ನ ಸುರಿದ ಉತ್ತಮ ಮಳೆಯು ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಹೊಸ ಜೀವಕಳೆ ತಂದಿದೆ.
ಕನ್ನಡಪ್ರಭ ವಾರ್ತೆ ಜಗಳೂರು
‘ಬರ’ದ ನೆರಳಿನಲ್ಲಿ ಕಂಗಾಲಾಗಿದ್ದ ಜಗಳೂರು ತಾಲೂಕಿನ ಭೂಮಿಗೆ ‘ಪುಷ್ಯ’ ಮಳೆ ತಂಪೆರೆದಿದ್ದು, ಸತತ ಮಳೆಯಿಲ್ಲದೇ ಕಂಗೆಟ್ಟಿದ್ದ ಅನ್ನದಾತರ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದೆ. ಸೋಮವಾರ ಮಧ್ಯಾಹ್ನ ಸುರಿದ ಉತ್ತಮ ಮಳೆಯು ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಹೊಸ ಜೀವಕಳೆ ತಂದಿದೆ.ತಾಲೂಕಿನಾದ್ಯಂತ ಮುಂಗಾರಿಗೆ ಹೊಸ ಚೈತನ್ಯ ತಾಲೂಕಿನ ಕಸಬ, ಬಿಳಿಚೋಡು ಹಾಗೂ ಸೊಕ್ಕೆ ಹೋಬಳಿ ವ್ಯಾಪ್ತಿಯ ಬಿಳಿಚೋಡು, ದೇವಿಕೆರೆ, ಗುತ್ತಿದುರ್ಗ, ಬಿದರಕೆರೆ, ಬಿಸ್ತುವಳ್ಳಿ, ತೋರಣಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯುವ ಮೂಲಕ ಭೂಮಿಯನ್ನು ತಂಪುಗೊಳಿಸಿತು.
ಬೆಳೆಗಳಿಗೆ ವರದಾನ:ಪ್ರಸ್ತುತ ಸುರಿದಿರುವ ಪುಷ್ಯ ಮಳೆಯು ರಾಗಿ, ಶೇಂಗಾ ಬಿತ್ತನೆಗೆ ದಾರಿ ಮಾಡಿಕೊಟ್ಟಿದೆ. ಸೂರ್ಯಕಾಂತಿ ಬೆಳೆಗೆ ಈ ಮಳೆ ಅತ್ಯಂತ ಅವಶ್ಯಕವಾಗಿತ್ತು. ಈಗ ಉತ್ತಮ ಇಳುವರಿಯ ನಿರೀಕ್ಷೆ ಮೂಡಿಸಿದೆ. ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಕಿ ಮಳೆಯಿಲ್ಲದೆ ಒಣಗುವ ಹಂತ ತಲುಪಿದ್ದ ಮೆಕ್ಕೆಜೋಳ ಮತ್ತು ಅಕ್ಕಡಿ ಬೆಳೆಗಳಿಗೆ ಈ ಮಳೆ ಹೊಸ ಚೈತನ್ಯ ನೀಡಿದೆ.
ಕೀಟಬಾಧೆಗೆ ಮಳೆಮದ್ದು:ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಇತ್ತೀಚೆಗೆ ಕೆಂಪು ನುಸಿ, ಬಿಳಿ ನುಸಿ ಹಾಗೂ ಸುಳಿ ತಿಗಣೆ ರೋಗಗಳ ವ್ಯಾಪಕ ಬಾಧೆ ತಟ್ಟಿತ್ತು. ಆದರೆ, ಈ ಭರ್ಜರಿ ಮಳೆ ರಭಸಕ್ಕೆ ಅಡಕೆ ಮರಗಳ ಸುಳಿಯಲ್ಲಿದ್ದ ಕೀಟಗಳು ತೊಳೆದುಹೋಗಿದ್ದು, ರೈತರು ಕೀಟನಾಶಕ ಸಿಂಪಡಿಸುವ ವೆಚ್ಚದಿಂದ ಬಚಾವ್ ಆದಂತಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬರಪೀಡಿತ ತಾಲೂಕು ಘೋಷಿಸಿ:ಅರ್ಧ ಮಳೆಗಾಲ ಮುಗಿದರೂ ಸೂಕ್ತ ಮಳೆಯಾಗದೇ ಬಿತ್ತಿದ ಬೆಳೆಗಳೆಲ್ಲ ಒಣಗಿ ಬರದ ಛಾಯೆ ಆವರಿಸಿದೆ. ಈಗ ಬಂದಿರುವ ಮಳೆ ಕೊಂಚ ನೆಮ್ಮದಿ ತಂದಿದೆ. ಆದರೂ, ರೈತರು ಅನುಭವಿಸಿದ ನಷ್ಟ ಅಪಾರ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಜಗಳೂರನ್ನು ‘ಬರಪೀಡಿತ ತಾಲೂಕು’ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಅಸಗೋಡು ಗ್ರಾಮದ ರೈತರಾದ ಶಂಭುಲಿಂಗಪ್ಪ, ಕರಿಬಸಪ್ಪ ಸೇರಿದಂತೆ ವಿವಿಧ ರೈತ ಸಂಘಟನೆ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
- - --20ಜಗಳೂರು1: ಜಗಳೂರು ತಾಲೂಕಿನಲ್ಲಿ ಮಳೆ ಸುರಿಯಿತು.