ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾಪುರುಷರು ಮತ್ತು ಸಾಧಕರ ಜೀವನ ಚರಿತ್ರೆಯನ್ನು ಓದುತ್ತಾ ವಿದ್ಯಾರ್ಥಿಗಳು ಸಮಾಜಮುಖಿ ಬದುಕನ್ನು ರೂಪಿಸಿಕೊಂಡು ಸಾರ್ಥಕತೆ ಹೊಂದಬೇಕು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎನ್. ವಿನಯ್‌ಕುಮಾರ್ ತಿಳಿಸಿದರು.ತಾಲೂಕಿನ ಬಸರಾಳು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪರಿಚಯ ಪ್ರಕಾಶ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ನಡೆದ ಪುಸ್ತಕ ಓದು ಅಭಿಯಾನವನ್ನು ವಿಸ್ಮಯ ತೇಜಸ್ವಿ ಪುಸ್ತಕ ಓದುವುದರೊಡನೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಮಹತ್ವವನ್ನು ಅರಿಯಬೇಕು. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷಾ ಪಠ್ಯದ ಜೊತೆಗೆ ಬದುಕನ್ನು ಕಟ್ಟಿಕೊಡಲು ಪೂರಕವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಆದರ್ಶದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಓದಿನಿಂದ ಜ್ಞಾನ, ಸಹನೆ, ಬದುಕಿನ ದೂರದೃಷ್ಠಿ ಮತ್ತು ಆತ್ಮವಿಶ್ವಾಸ ಮೂಡುತ್ತದೆ. ವಿದ್ಯಾರ್ಥಿಗಳು ಪಠ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಓದುವುದರ ಜತೆಗೆ ಸಾಮಾಜಿಕ ಸಾಂಸ್ಕೃತಿಕ ಪ್ರಜ್ಞೆಯನ್ನು ಹುಟ್ಟುಹಾಕುವ ಇತರೆ ಪುಸ್ತಕಗಳನ್ನು ಓದಬೇಕು. ಉನ್ನತ ಮಟ್ಟದ ಅಧಿಕಾರಿಗಳಾಗುವ ಭರವಸೆ ಹೊಂದಿರುವವರು ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ದಿಸೆಯಲ್ಲೇ ಮೊಬೈಲ್‌ಗೆ ಅಂಟಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸ್ತಬ್ಧತೆ ಉಂಟಾಗುತ್ತದೆ. ಕಣ್ಣು ಮತ್ತು ಮೆದುಳಿಗೆ ಅಪಾಯವಿರುವುದರಿಂದ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಜ್ಞಾನದ ಬೆಳಕು ಚೆಲ್ಲುವ ಭವಿಷ್ಯದ ಹಾದಿಯನ್ನು ಸುಗಮಗೊಳಿಸುವಂತಹ ಪುಸ್ತಕಗಳನ್ನು ಓದುವುದು ಉತ್ತಮ ಎಂದರು.ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ಮಾತನಾಡಿ, ವಿದ್ಯಾರ್ಥಿ ಯುವಜನರಲ್ಲಿ ಓದುವ ಅಭಿರುಚಿಯನ್ನು ಮೂಡಿಸುವ ಸಲುವಾಗಿ ನಮ್ಮ ಸಂಸ್ಥೆ ನಿರಂತರವಾಗಿ ಪುಸ್ತಕ ಓದುವ ಅಭಿಯಾನವನ್ನು ಶಾಲಾ ಕಾಲೇಜುಗಳಲ್ಲಿ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯ ಮತ್ತು ಗ್ರಾಮಾಂತರ ಪ್ರದೇಶದ ಸಾಮಾನ್ಯ ಜನರ ಬಳಿಗೂ ಓದುವ ಸಂಸ್ಕೃತಿಯನ್ನು ತೆಗೆದುಕೊಂಡು ಹೋಗುತ್ತೇವೆ ಎಂದರು.
ವಿದ್ಯಾರ್ಥಿಗಳಿಗೆ ವಿಸ್ಮಯ ತೇಜಸ್ವಿ ಕೃತಿಯನ್ನು ವಿತರಿಸಿದ ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥ ಎಚ್.ಎನ್.ಧನುಷ್‌ಗೌಡ ಮಾತನಾಡಿ, ಹಿಂದಿ ಹೇರಿಕೆ ಮಾತೃ ಭಾಷೆಯ ಬೆಳವಣಿಗೆ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತಿದೆ. ಸಂವಿಧಾನದಲ್ಲಿ ಯಾವುದೇ ಭಾಷೆಗೂ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿಲ್ಲ. ಎಲ್ಲ ಭಾಷೆಗಳನ್ನೂ ಸಮಾನವೆಂದು ಭಾವಿಸಲಾಗಿದೆ. ಆದ್ದರಿಂದ ಹಿಂದಿ ಹೇರಿಕೆಯಂತಹ ಪ್ರಕ್ರಿಯೆಗೆ ಅವಕಾಶ ನೀಡಬಾರದು ಎಂದರು.ಬಸರಾಳು ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎನ್.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕೂಟ ಸಂಸ್ಥೆಯ ಭಗವಾನ್ ಚಕ್ರವರ್ತಿ, ಮುಖಂಡರಾದ ಪ್ರಭು, ಶೋಷಿತ ಒಕ್ಕೂಟದ ರಾಜೇಂದ್ರ ಪ್ರಸಾದ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಇದೇ ವೇಳೆ ಕಲಾವಿದರಾದ ದೇವರಾಜ್ ಕೊಪ್ಪ, ವೈರಮುಡಿ ಮತ್ತು ತಂಡದಿಂದ ಜಾಗೃತಿ ಗೀತೆ ಹಾಡಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))