ಕನ್ನಡ ನಾಡನ್ನು ಕಟ್ಟಿದವರ ಸ್ಮರಣೆ ಅಗತ್ಯ : ನಿಂಗರಾಜ್‌ಗೌಡ

| Published : Jul 19 2025, 01:00 AM IST

ಸಾರಾಂಶ

ಈ ರಾಜರುಗಳೆಲ್ಲಾ ಕನ್ನಡ ನಾಡಿನ ಇತಿಹಾಸವನ್ನು ಉಜ್ವಲವಾಗಿ ಸೃಷ್ಟಿಸಿದರು. ಇಂತಹ ಮಹಾನ್ ದೊರೆಗಳ ಜೀವನ, ಸಾಧನೆ ಇಂದಿನವರಿಗೆ ಮಾದರಿಯಾಗಬೇಕಿದೆ. ಇತಿಹಾಸ ಪುರುಷರನ್ನು ನೆನೆಯುತ್ತಾ ಪರಭಾಷೆಗಳಿಂದ ತುಳಿತಕ್ಕೊಳಗಾಗಿರುವ ಕನ್ನಡಿಗರು ಹೊಸ ಇತಿಹಾಸವನ್ನು ಸೃಷ್ಟಿಸಬೇಕಿದೆ. ಕನ್ನಡಿಗರ ಶೌರ್ಯ, ಸ್ವಾಭಿಮಾನ, ಸಂಸ್ಕೃತಿಯನ್ನು ಈ ರಾಜವಂಶಸ್ಥರ ಚರಿತ್ರೆಯಿಂದ ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕಿದೆ.

ಪ್ರಶಸ್ತಿಗಳು ಸಾಧನೆಗಳನ್ನು ಪ್ರೋತ್ಸಾಹಿಸುವುದರ ಸಂಕೇತ: ಎಸ್‌ಪಿ । ಕದಂಬ ಸೈನ್ಯ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ನಾಡನ್ನು ಕಟ್ಟಿ ಬೆಳೆಸಿದ ಕದಂಬ ದೊರೆ ಮಯೂರವರ್ಮ, ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿ, ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ ಅವರನ್ನು ಸ್ಮರಿಸುವುದು ಹಾಗೂ ಇಂದಿನ ಮಕ್ಕಳಿಗೆ ಅವರನ್ನು ಪರಿಚಯಿಸುವುದು ತೀರಾ ಅಗತ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕದಂಬ ಸೈನ್ಯ ವತಿಯಿಂದ ಕದಂಬ- ಚಾಲುಕ್ಯ- ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ರಾಜರುಗಳೆಲ್ಲಾ ಕನ್ನಡ ನಾಡಿನ ಇತಿಹಾಸವನ್ನು ಉಜ್ವಲವಾಗಿ ಸೃಷ್ಟಿಸಿದರು. ಇಂತಹ ಮಹಾನ್ ದೊರೆಗಳ ಜೀವನ, ಸಾಧನೆ ಇಂದಿನವರಿಗೆ ಮಾದರಿಯಾಗಬೇಕಿದೆ. ಇತಿಹಾಸ ಪುರುಷರನ್ನು ನೆನೆಯುತ್ತಾ ಪರಭಾಷೆಗಳಿಂದ ತುಳಿತಕ್ಕೊಳಗಾಗಿರುವ ಕನ್ನಡಿಗರು ಹೊಸ ಇತಿಹಾಸವನ್ನು ಸೃಷ್ಟಿಸಬೇಕಿದೆ. ಕನ್ನಡಿಗರ ಶೌರ್ಯ, ಸ್ವಾಭಿಮಾನ, ಸಂಸ್ಕೃತಿಯನ್ನು ಈ ರಾಜವಂಶಸ್ಥರ ಚರಿತ್ರೆಯಿಂದ ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕಿದೆ ಎಂದು ಹೇಳಿದರು.

ಇತಿಹಾಸವನ್ನು ನೆನೆಯದವರು ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು. ಅದಕ್ಕಾಗಿ ಕನ್ನಡ ನಾಡಿನ ಹುಟ್ಟು, ಬೆಳೆದುಬಂದ ಬಗೆ, ಕನ್ನಡ ನಾಡನ್ನು ಆಳಿದ ಚಕ್ರವರ್ತಿಗಳ ಜೀವನವನ್ನು ಪಠ್ಯದ ಮೂಲಕ ಮಕ್ಕಳಿಗೆ ತಿಳಿಸಿಕೊಡಬೇಕು. ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕುವುದನ್ನು ಕಲಿಯಬೇಕು ಎಂದು ತಿಳಿಸಿದರು.

ಪ್ರಶಸ್ತಿಗಳು ವ್ಯಕ್ತಿತ್ವ, ಗೌರವ, ಘನತೆಯ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಪ್ರಶಸ್ತಿಗಳಿಂದ ಸಿಕ್ಕ ಗೌರವವನ್ನು ಉಳಿಸಿಕೊಂಡು ಅದಕ್ಕೆ ಧಕ್ಕೆಯಾಗದಂತೆ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಪ್ರಶಸ್ತಿಗೂ ಹೆಚ್ಚಿನ ಗೌರವ ಸಿಗುತ್ತದೆ. ಕೇಂದ್ರ ಸರ್ಕಾರ ಕೂಡ ತೆರೆಮರೆಯಲ್ಲಿ ಸಾಧನೆ ಮಾಡುತ್ತಿರುವ ಸಾಮಾನ್ಯರನ್ನು ಗುರುತಿಸಿ ಪದ್ಮ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು, ಪ್ರಶಸ್ತಿಗಳು ಮೌಲ್ಯಗಳನ್ನು ಕಳೆದುಕೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಸಮಾಜದಲ್ಲಿ ಹಲವರು ಮಾಡುವ ಸಾಧನೆಗಳಿಗೆ ಪ್ರೋತ್ಸಾಹ, ಚೈತನ್ಯಶಕ್ತಿ ತುಂಬುವುದಕ್ಕಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆದವರು ಇನ್ನೂ ಹೆಚ್ಚಿನ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕು. ಸಮಾಜಕ್ಕೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕ ಡಾ.ಎನ್.ನರಸಿಂಹಮೂರ್ತಿಗೆ ಕದಂಬ, ಚಾಲುಕ್ಯ, ರಾಷ್ಟ್ರಕೂಟ ಪ್ರಶಸ್ತಿ, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಶಾಲ್‌ರಘು ಅವರಿಗೆ ತಲಕಾಡು ಗಂಗ ಪ್ರಶಸ್ತಿ, ಸಮಾಜಸೇವಕ ಎಂ.ಜೆ.ಯೋಗೇಶ್‌ಗೆ ಕದಂಬ ರತ್ನ ಪ್ರಶಸ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಅವರಿಗೆ ಕದಂಬ ವೀರರಾಣಿ ಪ್ರಶಸ್ತಿ ಸೇರಿದಂತೆ ಹಲವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಪೊಲೀಸ್ ಇಲಾಖೆ, ನಿವೃತ್ತ ಯೋಧರು, ಸಮಾಜ ಸೇವಕರುಗಳಿಗೆ ಕದಂಬ- ಚಾಲುಕ್ಯ- ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆಯ ಹೆಸರಿನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಈ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ವಕೀಲೆ ಆಶಾಲತಾ ಪುಟ್ಟೇಗೌಡ, ಶ್ರೀರಂಗಪಟ್ಟಣ ನಗರ ಕಸಾಪ ಅಧ್ಯಕ್ಷೆ ಸರಸ್ವತಮ್ಮ ಇತರರಿದ್ದರು.

೧೭ಕೆಎಂಎನ್‌ಡಿ-೩

ಮಂಡ್ಯದ ಗಾಂಧಿ ಭವನದಲ್ಲಿ ಕದಂಬ ಸೈನ್ಯ ವತಿಯಿಂದ ಕದಂಬ- ಚಾಲುಕ್ಯ- ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಮಾತನಾಡಿದರು.