ಜಿಲ್ಲೆಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

| Published : Jan 27 2025, 12:49 AM IST

ಸಾರಾಂಶ

ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಲಾಲ್ ಬಹುದ್ದೂರ್ ಶಾಸ್ತ್ರಿ, ವೀರ ಸಾವರ್ಕರ್‌, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್, ಸರೋಜಿನಿ ನಾಯ್ಡು, ಜವಾಹರ್‌ ಲಾಲ್ ನೆಹರೂ ಸೇರಿದಂತೆ ನೂರಾರು ನೇತಾರರ ನೇತೃತ್ವದಲ್ಲಿ ಲಕ್ಷಾಂತರ ಚಳವಳಿಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದೇ ರೀತಿ ಸ್ವಾತಂತ್ರ್ಯ ನಂತರ ಹರಿದು ಹಂಚಿ ಹೋಗಿದ್ದ ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಒಗ್ಗೂಡಿಸಿದ ಕೀರ್ತಿ ಸರ್ದಾರ್‌ ವಲ್ಲಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಭಾಗವಹಿಸಿ ಮೊದಲು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಧ್ವಜಾರೋಹಣ ನೆರವೇರಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಲಾಲ್ ಬಹುದ್ದೂರ್ ಶಾಸ್ತ್ರಿ, ವೀರ ಸಾವರ್ಕರ್‌, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್, ಸರೋಜಿನಿ ನಾಯ್ಡು, ಜವಾಹರ್‌ ಲಾಲ್ ನೆಹರೂ ಸೇರಿದಂತೆ ನೂರಾರು ನೇತಾರರ ನೇತೃತ್ವದಲ್ಲಿ ಲಕ್ಷಾಂತರ ಚಳವಳಿಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದೇ ರೀತಿ ಸ್ವಾತಂತ್ರ್ಯ ನಂತರ ಹರಿದು ಹಂಚಿ ಹೋಗಿದ್ದ ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಒಗ್ಗೂಡಿಸಿದ ಕೀರ್ತಿ ಸರ್ದಾರ್‌ ವಲ್ಲಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ೧೯೩೦ರ ಜನವರಿ ೨೬ರಂದು ಭಾರತದಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಸ್ಥಾಪನೆಗೆ ಅವಿರತವಾಗಿ ಶ್ರಮಿಸುವ ಪ್ರತಿಜ್ಞೆ ಮಾಡಿತು. ಸತತ ಸಂಗ್ರಾಮ ಹಾಗೂ ಪ್ರಯತ್ನದ ಫಲವಾಗಿ ೧೯೫೦ರ ಜನವರಿ ೨೬ರಂದು ಅದು ನನಸಾಯಿತು. ಅಂದು ನಾವು ಅತಿದೊಡ್ಡ ಲಿಖಿತ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಅಂದಿನಿಂದ ಇಂದಿನವರೆಗೂ ಈ ಸಂವಿಧಾನ ಎಲ್ಲರ ಹಕ್ಕುಗಳ ರಕ್ಷಣೆ ಮಾಡುತ್ತಾ ನಮ್ಮನ್ನು ಐಕ್ಯತೆಯೊಂದಿಗೆ ಮುನ್ನಡೆಸಿದೆ ಎಂದರು.

ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಮುಖ ಆದ್ಯತೆ ನೀಡಿ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲಾಗಿದೆ. ಅನ್ನಭಾಗ್ಯ ಪ್ರತಿಯೊಬ್ಬರು ಆಹಾರದ ಕೊರತೆ ಇಲ್ಲದೆ ಪ್ರತಿ ದಿನ ಮೂರು ಹೊತ್ತು ಆಹಾರವನ್ನು ಸೇವಿಸಬೇಕು ಎಂಬ ದೃಷ್ಟಿಯಿಂದ ಸರ್ಕಾರ ಬಿ.ಪಿ.ಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ವ್ಯಕ್ತಿಗೆ ಪ್ರತಿ ಮಾಹೆ ೧೦ ಕೆ.ಜಿ ಅಕ್ಕಿಯನ್ನು ನೀಡಲು ತೀರ್ಮಾನಿಸಿ ಅನ್ನಭಾಗ್ಯ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಸೇರಿದಂತೆ ಒಟ್ಟು ೪,೯೭.೧೭೪ ಪಡಿತರ ಕಾರ್ಡ್‌ದಾರರಿದ್ದು, ೫ ಕೆ.ಜಿ ಹೆಚ್ಚುವರಿ ಅಕ್ಕಿ ವಿತರಣೆ ಬದಲಿಗೆ ಪ್ರತಿ ಕಾರ್ಡ್‌ದಾರರಿಗೆ ೧೭೦ ರು.ನಂತೆ ಹಣ ಪಾವತಿ ಮಾಡಲಾಗುತ್ತಿದೆ. ಈ ಸಂಬಂಧ ಜಿಲ್ಲೆಗೆ ಜುಲೈ-೨೦೨೩ರಿಂದ ಸೆಪ್ಟೆಂಬರ್ - ೨೦೨೪ರ ಮಾಹೆಯವರೆಗೆ ರು. ೩೩೮.೪೪ ಕೋಟಿ ಹಣ ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮುಖಾಂತರ ಪಾವತಿಸಲಾಗಿದೆ.

ಶಕ್ತಿ ಯೋಜನೆ: ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ೨೦೨೩ರ ಜೂನ್ ೧೧ರಿಂದ ಜ.೨೦ರವರೆಗೆ ಜಿಲ್ಲೆಯಲ್ಲಿ ೧೧.೬೫ ಕೋಟಿ ಮಹಿಳೆಯರು ಕೆ.ಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ೩೭೯.೪೨ ಕೋಟಿ ರು.ಗಳನ್ನೂ ವೆಚ್ಚ ಮಾಡಲಾಗಿದೆ. ಗೃಹಲಕ್ಷ್ಮಿ ಮನೆಯ ಯಜಮಾನಿಗೆ ಮನೆ ನಡೆಸಲು ಅನುಕೂಲವಾಗುವಂತೆ ಪ್ರತಿ ಮಾಹೆ ರು. ೨,೦೦೦ ಗಳನ್ನು ನೀಡಲು ಉದ್ದೇಶಿಸಿದ್ದು, ಜಿಲ್ಲೆಯಲ್ಲಿ ೪.೬೯,೬೫೨ ಮಹಿಳಾ ಫಲಾನುಭಗಳಿದ್ದು, ಜಿಲ್ಲೆಯ ೪,೩೯,೮೧೧ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್-೨೦೨೩ರಿಂದ ಅಕ್ಟೋಬರ್-೨೦೨೪ರವರೆಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ೧೨೬.೪೯ ಕೋಟಿ ರು. ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೫,೩೧,೦೭೬ ಗೃಹಬಳಕೆದಾರರಿದ್ದು, ೫,೨೯,೮೭೯ ಗ್ರಾಹಕರು ನೋಂದಣಿಯಾಗಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಡಿಸೆಂಬರ್ ಅಂತ್ಯದವರೆಗೆ ೩,೯೧,೯೪೩ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ದೃಢ ಸಂಕಲ್ಪ ಮಾಡಿದೆ. ನಮ್ಮ ಸರ್ಕಾರ ನೀಡಿರುವ ಎಲ್ಲಾ ಆಶ್ವಾಸನೆಗಳ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಿದ್ದು ಸರ್ವರೂ ಸಹಕರಿಸಲು ಕೋರಿದೆ. ನಮ್ಮ ದೇಶ ಈಗಾಗಲೇ ಬಹುಮುಖವಾಗಿ ಪ್ರಗತಿಯ ಹಾದಿಯಲ್ಲಿದೆ. ಸಮೃದ್ಧ ಭಾರತ ಇನ್ನಷ್ಟು ಬೆಳಗಲಿ ಎಂಬುದು ನಮ್ಮೆಲ್ಲರ ಹಾರೈಕೆ ಎಂದು ತಿಳಿಸಿದರು. ಇದೇ ವೇಳೆ ತೆರೆದ ವಾಹನದಲ್ಲಿ ತೆರಳಿ ವಿವಿಧ ಪೊಲೀಸ್ ತುಕಡಿ, ಎನ್‌ಸಿಸಿ, ಸೇವಾದಳ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ೨೮ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ನಡೆದ ಆಕರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತಾರು ಗಣ್ಯರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಅಂತಿಮವಾಗಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಡೆದ ದೇಶ ಭಕ್ತಿ ಮೂಡಿಸುವ ವೀರಯೋಧರ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನಸೆಳೆಯಿತು. ಇದೇ ವೇಳೆ ನಗರಪಾಲಿಕೆ ಹಾಸನವಾಗಿದೆ ಎಂದು ಘೋಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ಎಸ್ಪಿ ಮೊಹಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಶಾಂತಲಾ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು, ಉಪ ವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್‌ ಶ್ವೇತಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಈ . ಕೃಷ್ಣೇಗೌಡ, ಇತರರು ಉಪಸ್ಥಿತರಿದ್ದರು.