ಸಾರಾಂಶ
ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಯೋಧರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ತಿಪಟೂರು
ಕಾರ್ಗಿಲ್, ಸಿಯಾಚಿನ್ ಮುಂತಾದ ಶೀತ ಪ್ರದೇಶಗಳಲ್ಲಿ ಜೀವದ ಹಂಗು ತೊರೆದು ದೇಶದ ರಕ್ಷಣೆಗಾಗಿ ಹೋರಾಟ ಮಾಡುವಂತಹ ಸೈನಿಕರನ್ನು ಗೌರವಿಸುವ ಜೊತೆಗೆ ಯುವ ಪೀಳಿಗೆ ದೇಶ ರಕ್ಷಣೆಗೆ ಮುಂದಾಗಬೇಕೆಂದು ನಿವೃತ್ತ ಯೋಧ ಜಿ.ಬಿ. ಗಂಗಾಧರಪ್ಪ ತಿಳಿಸಿದರು. ನಗರದ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಸಂಘದ ಮಾಸಿಕ ಸಭೆಯ ಅಂಗವಾಗಿ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ೨೦ವರ್ಷಗಳ ಸೈನಿಕ ಸೇವೆಯ ಮಹತ್ವವನ್ನು ನೆನಪಿಸಿಕೊಂಡ ಅವರು, ಪಾಕಿಸ್ತಾನಿಗಳ ಕುಯುಕ್ತಿಯಿಂದ ಭಾರತ ದೇಶಕ್ಕೆ ಒದಗಿಬಂದಿದ್ದ ಅಪಾಯವನ್ನ ಸ್ವತಃ ಎದುರಿಸಿ ತನ್ನ ಸಹಚರ ಮಿತ್ರರ ವೀರ ಮರಣವನ್ನು ಕಣ್ಣಾರೆ ಕಂಡು ಅನುಭವಿಸಿದ ಸಂಗತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನನಗೆ ಅನೇಕ ಹುದ್ದೆಗಳು ಮನೆ ಬಾಗಿಲಿಗೆ ಬಂದರೂ ಸೈನಿಕನಾಗಿ ದೇಶ ಸೇವೆ ಮಾಡುವ ಉದ್ದೇಶದಿಂದ ತ್ಯಜಿಸಿ ಸೈನಿಕನಾಗಿ ಪರಿಶ್ರಮದಿಂದ ಉನ್ನತ ಹುದ್ದೆಯವರೆಗೂ ತಲುಪಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಮುಂದೆ ಇನ್ನೂ ಅವಕಾಶಗಳಿದ್ದರೂ ಅನಿವಾರ್ಯ ಕಾರಣಗಳಿಂದ ನಿವೃತ್ತರಾಗಿ ಪ್ರಸ್ತುತ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು. ನಿವೃತ್ತ ಪ್ರಾಂಶುಪಾಲ ಮರುಳಪ್ಪ ಮಾತನಾಡಿ, 16ನೇ ಶತಮಾನದಿಂದ 19ನೇ ಶತಮಾನದವರೆಗೂ ಭಾರದ ದೇಶ ಅನ್ಯರ ದಾಸ್ಯಕ್ಕೆ ಒಳಗಾಗಿತ್ತು. ಮಹಾನ್ ನಾಯಕ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಇದರಿಂದ ದೇಶದ ಜನರು ನೆಮ್ಮದಿಯಿಂದ ಬದುಕುವಂತಾಯಿತು. ಆದ್ದರಿಂದ ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಮತ್ತೋರ್ವ ನಿವೃತ್ತ ಯೋಧ ಎಸ್.ಎಸ್. ಕುಮಾರಸ್ವಾಮಿ ಹಾಗೂ ದಾಸೋಹಿ ದಾನಿ ಚಿಕ್ಕಣ್ಣನವರನ್ನು ಸನ್ಮಾನಿಸಲಾಯಿತು. ನಂತರ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾಗಿ ನೇಮಕ ಗೊಂಡ ನಿವೃತ್ತ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಗುರುಸ್ವಾಮಿಯವರನ್ನು ಅಭಿನಂದಿಸಲಾಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಸಾಪ ಜಿಲ್ಲಾಧ್ಯಕ್ಷ ವಿದ್ವಾನ್ ಸಿದ್ದರಾಮಯ್ಯ, ಕದಳಿ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಿ, ಸಂಘದ ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಸದಸ್ಯರುಗಳಾದ ಮಲ್ಲಪ್ಪಚಾರ್, ಗಂಗಾಧರ್, ಶಿವಗಂಗಪ್ಪ, ಸೋಮಶೇಖರ್, ಜಿ. ಕುಮಾರಸ್ವಾಮಿ, ಕಾತ್ಯಾಯಿನಿ, ಮುನಿಸಿದ್ದಯ್ಯ ಮತ್ತಿತರರಿದ್ದರು.