ಸಾರಾಂಶ
-ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗೆ ನೂತನ ಕೊಠಡಿ ಕಾಮಗಾರಿಗೆ ಶಾಸಕ ಚಂದ್ರಪ್ಪ ಭೂಮಿಪೂಜೆ
----ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸಿ ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.ಭರಮಸಾಗರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಒಂಬತ್ತು ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಭರಮಸಾಗರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕನಾದಾಗ 1995 ರಲ್ಲಿ ಹತ್ತು ಎಕರೆ ಜಾಗ ಖರೀದಿಸಿ ಸರ್ಕಾರಿ ಐ.ಟಿ.ಐ. ಕಾಲೇಜು ಮತ್ತು ಪದವಿ ಕಾಲೇಜು ಆರಂಭಿಸಿದ್ದೆ. ಆಗ ಜಿಲ್ಲೆಯ ಯಾವ ಊರಿನಲ್ಲಿಯೂ ಐ.ಟಿ.ಐ. ಕಾಲೇಜು ಇರಲಿಲ್ಲ ಎಂದರು.ತಾಲೂಕಿನಾದ್ಯಂತ ಮುನ್ನೂರಕ್ಕೂ ಹೆಚ್ಚು ಶಾಲೆ ಕಟ್ಟಿಸಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮೆಷಿನರಿ ಮತ್ತು ಪೀಠೋಪಕರಣಗಳನ್ನು ಐ.ಟಿ.ಐ.ಕಾಲೇಜಿಗೆ ನೀಡಲಾಗಿದೆ. ಮಕ್ಕಳನ್ನು ಕೇವಲ ಶಿಕ್ಷಣಕ್ಕಷ್ಟೆ ಸೀಮಿತಗೊಳಿಸಬಾರದು. ಪದವಿಯ ಜೊತೆ ಕೌಶಲ್ಯ ಶಿಕ್ಷಣ ಸಿಕ್ಕಾಗ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿವಂತರನ್ನಾಗಿ ಮಾಡಬೇಕು ಎಂದರು.
ಈ ಭಾಗದಲ್ಲಿ ಇನ್ನು 25 ಶಾಲೆಗಳನ್ನು ತೆರೆಯುತ್ತೇನೆ. ಜೆ.ಹೆಚ್.ಪಟೇಲ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ವಿದ್ಯಾವಂತರಾಗಬೇಕೆಂದು ತಿಳಿಸಿದರು.ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಶೈಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕೋಗುಂಡೆ ಮಂಜುನಾಥ್, ಡಿ.ವಿ.ಪ್ರವೀಣ್‍ಕುಮಾರ್, ಕೆ.ಬಿ. ಮೋಹನ್, ಚಿಕ್ಕಬೆನ್ನೂರು ತೀರ್ಥಪ್ಪ, ಕಲ್ಲೇಶ್, ಮಲ್ಲೇಶಪ್ಪ, ಸಿದ್ದಲಿಂಗಪ್ಪ, ಚಂದ್ರಶೇಖರ್, ರೇವಣಸಿದ್ದಪ್ಪ, ಗೌತಮ್ ಕಾಮತ್, ಮಾಧವ್‍ರಾವ್, ಎಸ್.ಡಿ.ಎಂ.ಸಿ. ಸದಸ್ಯರುಗಳು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.----
ಫೋಟೋ : ಭರಮಸಾಗರದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ.