ಕಳೆದ ಮೇ 24ರ ರಾತ್ರಿ ಹೆಬ್ರಿಯ ಅನಂತನಗರದಲ್ಲಿರುವ ಎಸ್‌ಆರ್‌ಎಸ್ ಶಾಲೆ ಸಮೀಪದ ಕೀರ್ತನ್ ಪ್ರಭು ಅವರ ಮನೆಯಲ್ಲಿ ನಡೆದಿದ್ದ ಸುಮಾರು ₹59.77 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣ ಕಳ್ಳತನ ಪ್ರಕರಣವನ್ನು ಹೆಬ್ರಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಳ: ಮೇ 24ರ ರಾತ್ರಿ ಹೆಬ್ರಿಯ ಅನಂತನಗರದಲ್ಲಿರುವ ಎಸ್‌ಆರ್‌ಎಸ್ ಶಾಲೆ ಸಮೀಪದ ಕೀರ್ತನ್ ಪ್ರಭು ಅವರ ಮನೆಯಲ್ಲಿ ನಡೆದಿದ್ದ ಸುಮಾರು ₹59.77 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣ ಕಳ್ಳತನ ಪ್ರಕರಣವನ್ನು ಹೆಬ್ರಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡು ಮೂಲದ ರಮೀನ್ ಸಲೀಂ, ಮೂಡುಬಿದಿರೆ ಮಿಜಾರು ನಿವಾಸಿ ಹರೀಶ್ ಶೆಟ್ಟಿ ಹಾಗೂ ಕಾಸರಗೋಡು ಜಿಲ್ಲೆಯ ನೆಕ್ರಜೆ ಗ್ರಾಮದ ಮಹಮ್ಮದ್ ಸಫ್ಘಾನ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಮೇ 24ರ ರಾತ್ರಿ ಆರೋಪಿಗಳು ಮನೆಯ ಹಿಂಭಾಗದ ಕಿಟಕಿಯ ಚಿಲಕವನ್ನು ಮುರಿದು ಒಳನುಗ್ಗಿ, ಕಪಾಟಿನ ಬೀಗ ಒಡೆದು ಲಾಕರ್‌ನಲ್ಲಿದ್ದ ಸುಮಾರು ₹49.42 ಲಕ್ಷ ಮೌಲ್ಯದ ಚಿನ್ನಾಭರಣ, ₹3.95 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ ₹6.60 ಲಕ್ಷ ಮೌಲ್ಯದ ಚಿನ್ನದ ಹೊದಿಕೆ ಹೊಂದಿದ ವಜ್ರಾಭರಣಗಳನ್ನು ಕಳವು ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಹೆಬ್ರಿ ಪೊಲೀಸರು ತಾಂತ್ರಿಕ ಮಾಹಿತಿ, ಬೆರಳಚ್ಚು ಹಾಗೂ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದ ಪರಿಣಾಮ, ಕೇವಲ ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರಿಂದ ₹37.87 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ ₹ 4 ಲಕ್ಷ ಮೌಲ್ಯದ ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ತನಿಖೆಯಲ್ಲಿ ರಮೀನ್ ಸಲೀಂ ವಿರುದ್ಧ 2013ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವ್ಯಾಪ್ತಿಯಲ್ಲಿ ನಡೆದ ಆರ್.ಎನ್. ನಾಯಕ್ ಕೊಲೆ ಪ್ರಕರಣ ಸೇರಿದಂತೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಹರೀಶ್ ಶೆಟ್ಟಿ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಮಾದಕ ದ್ರವ್ಯ ಸೇವನೆ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯಕ್ ಹಾಗೂ ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ಪತ್ತೆ ದಳ ರಚಿಸಲಾಗಿತ್ತು. ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಪ್ರಭಾರ ಸಿಪಿಐ ರಾಘವೇಂದ್ರ, ಹೆಬ್ರಿ ಠಾಣೆಯ ಪಿಎಸ್‌ಐ ರವಿ ಬಿ.ಕೆ., ಚಂದ್ರ ಎ.ಕೆ., ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್., ಶಿರ್ವ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ, ಪಡುಬಿದ್ರಿ ಠಾಣೆಯ ಎಎಸ್‌ಐ ರಾಜೇಶ್ ಪಿ. ಸೇರಿದಂತೆ ಹಲವಾರು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಇದಲ್ಲದೆ, ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್, ನಿತಿನ್ ಹಾಗೂ ಜಿಲ್ಲಾ ಬೆರಳಚ್ಚು ಘಟಕದ ತಜ್ಞೆ ಇನ್ಸ್‌ಪೆಕ್ಟರ್ ಎಲ್. ಮೋಹನ ಕುಮಾರಿ ಮತ್ತು ಅವರ ತಂಡ ತನಿಖೆಗೆ ಸಹಕಾರ ನೀಡಿದ್ದರು.