ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಒತ್ತು ನೀಡಿ, ಸಾಂಕ್ರಾಮಿಕ ರೋಗ ಮುಕ್ತ ವಾತಾವರಣ ನಿರ್ಮಿಸುವಲ್ಲಿ ಗ್ರಾಪಂ ಆಡಳಿತ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಪದ್ಮಬಸವಂತಪ್ಪ ಹೇಳಿದರು.ತಾಲೂಕಿನ ಸೂಲೂರು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಡೆದ ಸ್ವಚ್ಛತಾ ಕಾರ್ಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ದಾಖಲೀಕರಣ ಮಾಡುವ ಕಾರ್ಯಕ್ರಮಕ್ಕೆ ಗಿಡ ನೆಟ್ಟು ಚಾಲನೆ ನೀಡಿ ಅವರು ಮಾತನಾಡಿದರು.ಬದ್ಧತೆಯಿಂದ ಕೆಲಸ ಮಾಡಿ
ಮಾರಕ ಡೆಂಘೀ ಮತ್ತಿತರ ಮಾರಕ ರೋಗಗಳಿಂದ ಮುಕ್ತವಾದ ವಾತಾವರಣ ನಿರ್ಮಾಣದಲ್ಲಿ ಗ್ರಾಪಂಯೊಂದಿಗೆ ಸಾರ್ವಜನಿಕರೂ ಸಹಕರಿಸಬೇಕು, ಕಸ, ಕೊಳಕು ಮುಕ್ತ ಉತ್ತಮ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಈಗ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ಸಿಕ್ಕಿದೆ, ಇದು ಗ್ರಾಮ ಸರ್ಕಾರವಾಗಿದೆ, ವಿಕೇಂದ್ರೀಕರಣದ ಮೂಲ ಉದ್ದೇಶ ಸಫಲಗೊಳ್ಳಲು ಗ್ರಾಪಂಗೆ ಆಯ್ಕೆಯಾಗಿ ಬರುವ ಜನಪ್ರತಿನಿಧಿಗಳು, ಅವರೊಂದಿಗೆ ಕೆಲಸ ಮಾಡುವ ಸರ್ಕಾರದ ಸಿಬ್ಬಂದಿ, ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಬೇಕು. ಗಾಂಧಿ ಕನಸಿನ ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಳಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಡೆಂಘೀ ಅತಿ ವೇಗವಾಗಿ ಹರಡುತ್ತಿದೆ, ಇದರ ತಡೆಗೆ ಅಗತ್ಯ ಕ್ರಮವಹಿಸಬೇಕು ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸಿ, ವಾರಕ್ಕೊಂದು ದಿನ ಶುಕ್ರವಾರ ಒಣದಿನವನ್ನಾಗಿ ಆಚರಿಸಿ, ನೀರು ಸಂಗ್ರಹ ತಾಣಗಳನ್ನು ಸ್ವಚ್ಚಗೊಳಿಸಿ. ಈ ರೋಗಕ್ಕೆ ಕಾರಣವಾದ ಈಡೀಸ್ ಸೊಳ್ಳೆ ಶುದ್ದ ನೀರಿನ ಮೂಲಕವೇ ತನ್ನ ಸಂತಾನೋತ್ಪತ್ತಿ ಹೆಚ್ಚಿಸಿಕೊಳ್ಳುವುದರಿಂದ ಮನೆಗಳ ಸುತ್ತ ನೀರಿನತಾಣ ಸ್ವಚ್ಚಗೊಳಿಸಿ, ತೆಂಗಿನ ಚಿಪ್ಪು, ಟೈರು, ಪ್ಲಾಸ್ಟಿಕ್ ಲೋಟಗಳಲ್ಲಿ ನೀರು ಸಂಗ್ರಹವಾಗಿದ್ದರೆ ತೆರವುಗೊಳಿಸಿ ಎಂದು ಸೂಚಿಸಿದರು.
ಆರ್‌ಡಿಪಿಆರ್ ಇಲಾಖೆ ದಾಖಲೀಕರಣಕ್ಕೆ ಸೂಲೂರು ಗ್ರಾಪಂನನ್ನು ಆಯ್ಕೆ ಮಾಡಿಕೊಂಡಿದೆ, ಇಲ್ಲಿ ಆಡಳಿತ ಮಂಡಳಿ ಉತ್ತಮವಾಗಿ ಕೆಲಸ ಮಾಡುತ್ತಿದೆ, ಸಾಂಕ್ರಾಮಿಕ ರೋಗ ತಡೆಗೆ ಮತ್ತಷ್ಟು ಸ್ವಚ್ಚತಾ ಕಾರ್ಯಕ್ಕೆ ಮುನ್ನುಡಿ ಬರೆಯಬೇಕು ಎಂದು ಕಿವಿಮಾತು ಹೇಳಿದರು.ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿ
ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಮಾತನಾಡಿ, ಈಗಾಗಲೇ ಡೆಂಗ್ಯು ನಿಯಂತ್ರಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ, ನೀರು ಸಂಗ್ರಹ ತಾಣಗಳು, ಚರಂಡಿಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದ್ದು, ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು.ಸ್ವಚ್ಛತಾ ಅಭಿಯಾನಕ್ಕೆ ಚಾಲನೆಇದೇ ಸಂದರ್ಭದಲ್ಲಿ ಸೂಲೂರು ಗ್ರಾ.ಪಂ ವ್ಯಾಪ್ತಿಯ ಕೆಂದಟ್ಟಿಯಲ್ಲಿ ವೀರಗಲ್ಲುಗಳ ಸಂರಕ್ಷಣೆ, ಕುಡಿಯುವ ನೀರಿನ ವಾಟರ್‌ಫಿಲ್ಟರ್ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದು, ಅಧ್ಯಕ್ಷ ಸುರೇಶ್ ನೇತೃತ್ವ ವಹಿಸಿದ್ದರು. ಇಂದಿನ ಸ್ವಚ್ಛತಾ ಅಭಿಯಾನದಲ್ಲಿ ಸೂಲೂರು ಬಸ್ ನಿಲ್ದಾಣದ ಸುತ್ತಮುತ್ತ ಪಾರ್ಥೇನಿಯಂ ನಾಶ, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪೆಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ಕಲ್ಯಾಣಿ, ಓವರ್ ಹೆಡ್ ಟ್ಯಾಂಕ್, ಅಂಗನವಾಡಿ ಕೇಂದ್ರದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಸೂಲೂರು ಗ್ರಾಪಂ ವ್ಯಾಪ್ತಿಯ ಕೆಂದಟ್ಟಿ ಮಡಿವಾಳ. ಸೂಲೂರು. ಪೆಮ್ಮಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ವಚ್ಛತಾ ಕಾರ್ಯದಲ್ಲಿ ಜಿಪಂನ ಸ್ವಚ್ಚಭಾರತ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿರುವ ಜಗದೀಶ್, ಸೂಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೂಪವಿಜಯ್, ಸದಸ್ಯರಾದ ಕೆಂದಟ್ಟಿ ಎಂ.ನಾರಾಯಣಸ್ವಾಮಿ, ನಂದಿನಿ, ಮೇಷ್ಟ್ರು ನಾರಾಯಣ್ ಸ್ವಾಮಿ, ಸೂಲೂರು ಅಶೋಕ್, ಗಾಯಿತ್ರಮ್ಮ ಮುನಿರೆಡ್ಡಿ, ನುಗ್ಲಾಪುರ ಕೃಷ್ಣಮೂರ್ತಿ, ಚಳ್ಳಹಳ್ಳಿ ಆದಿಮೂರ್ತಿ, ತಲಗುಂದ ವೆಂಕಟೇಶಪ್ಪ, ರಬಿನಾತಾಜ್, ನರಸ್‌ರಾಜ್, ಗರುಡನಹಳ್ಳಿ ಲೋಕೇಶ್, ಸಿದ್ದಮ್ಮ, ಹೊಗರಿ ಗೊಲ್ಲಹಳ್ಳಿ ಶ್ಯಾಮಲಮ್ಮ, ಪಿಡಿಒ ಬಾಲಾಜಿ, ಕಾರ್ಯದರ್ಶಿ ಶ್ರೀನಿವಾಸಪ್ಪ, ಸಿಬ್ಬಂದಿ ಪ್ರದೀಪ್ ಕುಮಾರ್ ಇದ್ದರು.