ಸಕಲೇಶಪುರ ಪುರಸಭೆ ಆವರಣ ದುರಸ್ತಿಗೆ ಚಾಲನೆ

| Published : Nov 21 2024, 01:02 AM IST

ಸಾರಾಂಶ

ಸಕಲೇಶಪುರ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪುರಸಭೆಯ ಆವರಣ ಸಂಪೂರ್ಣ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಆವರಣವನ್ನು ದುರಸ್ತಿಪಡಿಸಬೇಕು ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ತಾಲೂಕು ಪಂಚಾಯ್ತಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಇಲ್ಲಿ ರಸ್ತೆ ಕಾಮಗಾರಿ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಪುರಸಭಾ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿ, ಪುರಸಭೆಯ ಆವರಣ ಸಂಪೂರ್ಣ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಆವರಣವನ್ನು ದುರಸ್ತಿಪಡಿಸಬೇಕು ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ತಾಲೂಕು ಪಂಚಾಯ್ತಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಇಲ್ಲಿ ರಸ್ತೆ ಕಾಮಗಾರಿ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ೨೫ಲಕ್ಷ ರು. ವೆಚ್ಚದಲ್ಲಿ ಪುರಸಭೆಯ ಆವರಣದ ದುರಸ್ತಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಿಂದ ತಾಲೂಕು ಪಂಚಾಯತ್‌ಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಸರ್ಕಾರದಿಂದ ಬರುತ್ತಿರುವ ಅನುದಾನ ಅತ್ಯಂತ ಕಡಿಮೆ ಇರುವುದರಿಂದ ಹಂತ ಹಂತವಾಗಿ ಪಟ್ಟಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್‌, ಉಪಾಧ್ಯಕ್ಷೆ ಜರೀನಾ, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಪುರಸಭಾ ಸದಸ್ಯೆ ವನಜಾಕ್ಷಿ, ಪುರಸಭಾ ಆರೋಗ್ಯ ನಿರೀಕ್ಷಕ ದಾನವೇಂದ್ರ ಸೇರಿದಂತೆ ಇತರರು ಹಾಜರಿದ್ದರು.