ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ಮಳೆಗಿಂತ ಗಾಳಿಯ ಆರ್ಭಟ ಜೋರಾಗಿದ್ದು ಮಳೆಗಾಳಿಯಿಂದ ಹಲವಾರು ಮರಗಳು ಧರಾಶಾಹಿಯಾಗಿವೆ.ಶ್ರಾವಣದ ಆರಂಭದಲ್ಲೆ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು ಮಳೆ ಹಿನ್ನೆಲೆಯಲ್ಲಿ ಶನಿವಾರ ತಾಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ನೀಡಲಾಗಿತ್ತು. ಭಾರಿ ಮಳೆಯಿಂದ ಶಿರಾಡಿಘಾಟ್‌ನಲ್ಲಿ ಉರುಳಿದ ಮರ ಹಾಗೂ ಲಘು ಭೂಕುಸಿತ ಆಗಿದೆ. ಶಿರಾಡಿಘಾಟ್ ರಾಷ್ಟೀಯ ಹೆದ್ದಾರಿ ೭೫ ಮಾರನಹಳ್ಳಿಯಿಂದ ಮುಂದೆ ಮರವೊಂದು ಉರುಳಿ ಬಿದ್ದ ಪರಿಣಾಮ ಲಘು ಭೂಕುಸಿತ ಸಂಭವಿಸಿತ್ತು. ಇದರಿಂದ ಕೆಲಕಾಲ ಸಂಚಾರದಲ್ಲಿ ಅಡಚಣೆಯುಂಟಾಗಿತ್ತು. ನಂತರ ಹೆದ್ದಾರಿ ಸಿಬ್ಬಂದಿ ಬಿದ್ದ ಮಣ್ಣು ಹಾಗೂ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಿವಿಧೆಡೆ ಬಿದ್ದ ಮರಗಳು:ಭಾರಿ ಗಾಳಿಯಿಂದಾಗಿ ತಾಲೂಕಿನ ವಿವಿಧ ರಾಜ್ಯ ಹೆದ್ದಾರಿಗಳು ಹಾಗೂ ಜಿ.ಪಂ ರಸ್ತೆಗಳಲ್ಲಿ ಮರಗಳು ಬಿದ್ದಿದ್ದು ಹಲವೆಡೆ ಮರದ ರೆಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸಕಲೇಶಪುರ-ಹಾನುಬಾಳು-ಮೂಡಿಗೆರೆ ರಾಜ್ಯ ಹೆದ್ದಾರಿ ಅಗಲಟ್ಟಿ, ವೆಂಕಟಹಳ್ಳಿ, ರಕ್ಷಿದಿ ಸಮೀಪ ರಸ್ತೆ ಬದಿ ಗಾಳಿಯಿಂದ ಬಿದ್ದಿದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು. ಕಡಗರಹಳ್ಳಿಯಿದ ಹಿರದನಹಳ್ಳಿ ರಸ್ತೆಯ ಮೇಲೆ ಭಾರಿ ಮರವೊಂದು ಬಿದ್ದು ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ವಲಯ ಅರಣ್ಯಾಧಿಕಾರಿ ಹೇಮಂತ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.ಅತಿಯಾದ ಗಾಳಿ ಮಳೆಯಿಂದ ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರ, ಮನೆ ಸಂಪೂರ್ಣ ಜಖಂ ಆಗಿದೆ. ಕಳೆದ ಐದು ದಿನಗಳಿಂದ ಮಲೆನಾಡು ತಾಲೂಕಿನಾದ್ಯಂತ ಸುರಿಯುತ್ತಿರುವ ಅತಿಯಾದ ಪುಷ್ಯ ಮಳೆ ಗಾಳಿಯಿಂದಾಗಿ ತಾಲೂಕಿನ ಮಾರನಹಳ್ಳಿ ಗ್ರಾಮದ ಜಿ.ಟಿ. ರುಕ್ಮಿಣಿ ಎಂಬುವವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮನೆಯು ಸಂಪೂರ್ಣ ಜಖಂಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಮನೆಯ ಮಾಲೀಕರಾದ ಜಿ.ಟಿ. ರುಕ್ಮಿಣಿ ಮನವಿ ಮಾಡಿದ್ದಾರೆ.ಗಾಳಿಯ ಆರ್ಭಟ ಜೋರು:
ತಾಲೂಕಿನ ಹೆತ್ತೂರು, ಹಾನುಬಾಳ್ ಹೋಬಳಿಗಳಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಜನ ಮನೆಗಳಿಂದ ಹೊರಗೆ ಬರಲು ಅಂಜಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ವೈರ್‌ಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ಗ್ರಾಮಾಂತರ ಪ್ರದೇಶಗಳು ಕತ್ತಲಿನಲ್ಲಿ ಮುಳುಗಿದೆ.