ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ 2002-2007ರ ಸಾಲಿನಲ್ಲಿ ಕಲಾ ಪದವಿಯನ್ನು ಪೂರೈಸಿದ ಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನ ಹಾಗೂ ಗುರುವಂದನೆ ‘ಸಂಗಮ’ ಕಾರ್ಯಕ್ರಮವನ್ನು ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉಡುಪಿ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.ಗುರುವಂದನೆ ಸ್ವೀಕರಿಸಿ ಮಾತನಾಡಿದ ಕಲಾಗುರು ವಿಶ್ವೇಶ್ವರ ಪರ್ಕಳ, ನಾನು ಕಲೆ ಕಲಿತ, ಕಲಿಸಿದ ಈ ಕಲಾಶಾಲೆ ವ್ಯಾಪಾರಿಕರಣವಾಗಿಲ್ಲ. ಇಲ್ಲಿ ನಾವು ಅನೇಕ ಬಾರಿ ಅವಕರಾಶ ವಂಚಿತರಾದಂತೆ ನಮ್ಮ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಹೆಚ್ಚು ಶಿಸ್ತು ಅಳವಡಿಸಿ ಪಾಠ ಮಾಡಿದ್ದೇನೆ. ಪರಿಣಾಮ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಕಲಾವಿದರಾಗಿ ಮಿಂಚುತಿದ್ದಾರೆ ಎಂದರು.ಸ್ಮರಣಿಕಾ ಸಂಸ್ಥೆಯ ಸಂಸ್ಥಾಪಕ ದಿವಾಕರ ಸನೀಲ್ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಚಿತ್ರಕಲಾ ಶಿಕ್ಷಕರನ್ಬು ನೇಮಕಾತಿ ಆಗುತ್ತಿಲ್ಲ. ಸರ್ಕಾರ ನೇಮಕ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಚಿತ್ರಕಲಾ ಶಿಕ್ಷಣವನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಲಾಶಾಲೆಯ ಶಿಕ್ಷಕರಾದ ವಿಶ್ವೇಶ್ವರ ಪರ್ಕಳ, ಡಾ.ನಿರಂಜನ್ ಯು.ಸಿ., ಡಾ.ವಿಶ್ವನಾಥ ಎ.ಎಸ್., ಬಸವರಾಜ ಕುತ್ನಿ, ಸುಮಂಗಲಾ ಭಟ್, ಡಾ.ಭಾರತಿ ಮರವಂತೆ, ಮಹೇಶ್ ಉಮತಾರ್, ಗಣೇಶ್ ಮಂದಾರ, ಶಂಕರ್ ಹಂದಾಡಿ ಹಾಗೂ ಮುರಳಿ ಕೃಷ್ಣ ರಾವ್ ಅವರಿಗೆ ದಿ.ಕಲಾಗುರು ಕೆ.ಎಲ್.ಭಟ್ ಸ್ಮರಣಾರ್ಥ ಗುರುವಂದನೆ ಸಲ್ಲಿಸಲಾಯಿತು.
ಕಲಾಶಾಲೆಯ ನಿರ್ದೇಶಕ ಡಾ.ನಿರಂಜನ್ ಯು.ಸಿ., ಕಲಾವಿದರಾದ ಡಾ. ಜನಾರ್ದನ ರಾವ್ ಹಾವಂಜೆ, ಅನ್ನಪೂರ್ಣ ಕಾಮತ್, ಕಾಂತಿ ನವೀನ್ ಪ್ರಭು, ಪ್ರಶಾಂತ್ ಕೋಟ, ಪ್ರವೀಣ್ ಮಲ್ಲಾರ್, ಪುರಂದರ್ ಎಸ್.ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋಧ ಎಸ್. ಸನಿಲ್ ಉಪಸ್ಥಿತರಿದ್ದರು.