ಸಾರಾಂಶ
ಕನ್ನಡ ಪ್ರಭವಾರ್ತೆ ಮಾಲೂರು
ವರ್ಷದ ಮೊದಲ ಹಬ್ಬವಾದ ಸಂಕ್ರಾತಿ ಹಬ್ಬವನ್ನು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಎಳ್ಳು ಬೆಲ್ಲ ಹಂಚುವ ಮೂಲಕ ಹಬ್ಬದ ಶುಭಾಶಯ ಕೋರಿ ಸಡಗರ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಿದರೆ, ಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಚಿಕ್ಕ ಮಾರಿಕಾಂಬಾ ದೇವಾಲಯದ ಬಳಿ ರಾಸುಗಳಿಗೆ ಪೂಜೆ ಸಲ್ಲಿಸಿ ತಳಿರು ತೋರಣದ ಕೆಳಗೆ ಓಡಿಸಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಪ್ರತಿವರ್ಷದಂತೆ ಈ ವರ್ಷವೂ ಸಹ ತಾಲೂಕಿನಾದ್ಯಂತ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಎಳ್ಳು ಬೆಲ್ಲ ಕಬ್ಬು ನೀಡಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಗ್ರಾಮೀಣ ಪ್ರದೇಶದಲ್ಲಿ ರಾಸುಗಳನ್ನು ತೊಳೆದು ಸಿಂಗರಿಸಿ ತೋರಣ ಕೆಳಗೆ ಹಾಯಿಸಿ ಹಬ್ಬವನ್ನು ಆಚರಣೆ ಮಾಡಿದರು.
ಅಲಂಕೃತ ರಾಸುಗಳಿಗೆ ಪೂಜೆಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಚಿಕ್ಕಮಾರಿಕಾಂಬಾ ದೇವಾಲಯದ ಬಳಿ ಅಲಂಕೃತ ರಾಸುಗಳಿಗೆ ಪೂಜೆ ಸಲ್ಲಿಸಿ ತಳಿರು ತೋರಣದ ಕೆಳಗೆ ಓಡಿಸಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಬಳಿ ರಾಸುಗಳಿಗೆ ಪೂಜೆ ಸಲ್ಲಿಸಿದ ನಂತರ ಚಿಕ್ಕ ಮಾರಿಕಾಂಬಾ ದೇವಾಲಯದ ಬಳಿ ಮರವಣಿಗೆ ಮೂಲಕ ಬಂದ ರಾಸುಗಳಿಗೆ ಸಂಕ್ರಾಂತಿ ಹಬ್ಬದ ಅಂಗವಾಗಿ ನಿರ್ಮಿಸಿದ್ದ ತಳಿರು ತೋರಣದ ಬಳಿ ಸಂಪ್ರದಾಯದಂತೆ ವಹ್ನಿಕುಲ ಸಮುದಾಯದವರು ಪೂಜೆ ಸಲ್ಲಿಸಿ ರಾಸುಗಳಿಗೆ ನೈವೇದ್ಯ ಅರ್ಪಿಸಿದರು.
ನಂತರ ತಳಿರು ತೋರಣದ ಕೆಳಗೆ ರಾಸುಗಳನ್ನು ಸಂಪ್ರದಾಯದಂತೆ ಓಡಿಸಿದರು. ರಾಸುಗಳನ್ನು ವೀಕ್ಷಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.ಈ ಸಂದರ್ಭದಲ್ಲಿ ಧರ್ಮರಾಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಪಿ. ವಿಜಯ ಕುಮಾರ್, ಯಜಮಾನ ಎಂಪಿವಿ ಪೆರುಮಾಳ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ ರಾಜಪ್ಪ, ಜಗನ್ನಾಥ್, ಕೃಷ್ಣಪ್ಪ, ರಾಮಚಂದ್ರಪ್ಪ, ಎಂಪಿ ನಾರಾಯಣಸ್ವಾಮಿ, ಸೀನಪ್ಪ, ಶಂಕರಪ್ಪ, ಎಂಸಿ ಚಂದ್ರು, ವೆಂಕಟೇಶ, ಗೌಡರಾದ ಸೀನಪ್ಪ, ನಾರಾಯಣಸ್ವಾಮಿ, ದರ್ಮ ದರ್ಶಿಗಳಾದ ಲಕ್ಷ್ಮಿನಾರಾಯಣ್, ಟೈಲರ್ ಆಂಜಿನಪ್ಪ, ಗೋಪಾಲ್, ಶ್ರೀನಿವಾಸ್, ಕರಗದ ಪೂಜಾರಿ ಮಂಜುನಾಥ್ ಅಭಿ ಇನ್ನಿತರರು ಹಾಜರಿದ್ದರು.