ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಯಲ್ಲಮ್ಮನಗುಡ್ಡದಲ್ಲಿ ಭರತ ಹುಣ್ಣಿಮೆ ನಿಮಿತ್ತ ಶನಿವಾರ ಸಂಭ್ರಮದಿಂದ ಜಾತ್ರೆ ಜರುಗಿತು. ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ 10 ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ.. ಎಂಬ ಜೈಕಾರ ಇಡೀ ಗುಡ್ಡದಲ್ಲಿ ಪ್ರತಿಧ್ವನಿಸಿತು.ಇದು ರಾಜ್ಯದ ದೊಡ್ಡ ಜಾತ್ರೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಗುಡ್ಡದ ವಿಶಾಲವಾದ ಪರಿಸರದಲ್ಲಿ ಬಿಡಾರ ಹೂಡಿದ್ದರು. ಅಲ್ಲಿಯೇ ಟೆಂಟ್ ಹಾಕಿ, ರಾತ್ರಿಯಿಡೀ ಜಾಗರಣೆ ಮಾಡಿದರು. ಬೆಳಗ್ಗೆ ಮತ್ತು ಸಂಜೆ ಯಲ್ಲಮ್ಮನಿಗೆ ಪೂಜಾ ಕೈಂಕರ್ಯ ನೆರವೇರಿಸಿದರು. ಕರ್ನಾಟಕಕ್ಕಿಂತ ಮಹಾರಾಷ್ಟ್ರದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಚಕ್ಕಡಿ, ಬಸ್, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮೂಲಕ ಶುಕ್ರವಾರ ಮಧ್ಯರಾತ್ರಿಯಿಂದಲೇ ಅಪಾರ ಜನಸ್ತೋಮ ದೇವಾಲಯದ ಆವರಣಕ್ಕೆ ಹರಿದು ಬಂದಿತ್ತು. ಗುಡ್ಡದ ತುಂಬೆಲ್ಲ ಅಲ್ಲಲ್ಲಿ ಒಲೆಗಳನ್ನು ಹೂಡಿ, ಅನ್ನ - ಸಾರು, ಪಲ್ಯೆ, ಹೋಳಿಗೆ, ವಡೆ, ಭಜ್ಜಿ ಮೊದಲಾದವುಗಳನ್ನು ತಯಾರಿಸಿ ಪರಡಿ ತುಂಬಿದರು. ನಂತರ ಕುಟುಂಬಸ್ಥರೆಲ್ಲ ಒಟ್ಟಾಗಿ ಕುಳಿತು ಮೃಷ್ಟಾನ್ನ ಭೋಜನ ಸವಿದರು. ದೇವಿ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.ಯಲ್ಲಮ್ಮ ದೇವಿ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಎಣ್ಣೆ ಹೊಂಡದಲ್ಲಿ ಪುರುಷರು ಹಾಗೂ ಮಹಿಳೆಯರ ಸ್ನಾನಕ್ಕಾಗಿ ಪ್ರತ್ಯೇಕ ಶಾವರ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ತಮ್ಮ ಶಕ್ತಿಯನುಸಾರ ದೇವಿಗೆ ಬೆಳ್ಳಿ, ಬಂಗಾರ, ಸೀರೆ, ಕುಪ್ಪಸ, ಚಿನ್ನಾಭರಣ, ಪೂಜಾ ಸಾಮಗ್ರಿಗಳನ್ನು ಅರ್ಪಿಸಿ, ಭಕ್ತಿಯ ಪರಾಕಾಷ್ಠೆ ಮೆರೆದರು.
ತಾಯಿ ಯಲ್ಲಮ್ಮನ ಗುಡ್ಡಕ್ಕೆ ನಾನು ಬರ್ತೆನ್ರೇಯವ್ವ, ಕಣ್ಣು ಕಾಣದ ಭಕ್ತನ ನಾನು ನನ್ನ ಕರ್ಕೋಂಡ ಹೋಗ್ರೆವ್ವ, ಯಲ್ಲವ್ವನ ಜಾತ್ರಿ ಬಲು ಜೋರ, ವರ್ಷವರ್ಷ ಇರ್ತೈತಿ ದರ್ಬಾರ್ ಸೇರಿದಂತೆ ವಿವಿಧ ಗೀತೆಗಳು ಗುಡ್ಡದ ತುಂಬೆಲ್ಲ ಅನುರಣಿಸಿದವು.ಶಾಸಕ ವಿಶ್ವಾಸ ವೈದ್ಯ, ಜಿಲ್ಲಾಡಳಿತ, ದೇವಸ್ಥಾನ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯವರು ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಶ್ರಮಿಸಿದರು. ಜಾತ್ರೆಯಲ್ಲಿ ಕಳೆದುಕೊಂಡ ಮಕ್ಕಳು, ಹಿರಿಯರನ್ನು ಹುಡುಕಲು ಅನುಕೂಲವಾಗಲೆಂದು ಪೊಲೀಸ್ ಇಲಾಖೆಯವರು ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದರು. ಇದರಿಂದ ತಮ್ಮವರಿಂದ ಕಳೆದುಕೊಂಡವರು ಮರಳಿ ತಮ್ಮವರನ್ನು ಸೇರಿ ನಿರಾಳವಾದರರು. ಯಲ್ಲಮ್ಮನಗುಡ್ಡದಿಂದ ಸವದತ್ತಿ, ಜೋಗುಳಬಾವಿ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.