ನಾಳೆ ಶಿವಮೊಗ್ಗದಲ್ಲಿ ‘ಸಾವಿರದ ವಚನ’ ಕಾರ್ಯಕ್ರಮ

| Published : May 08 2025, 12:33 AM IST

ಸಾರಾಂಶ

ಶಿವಮೊಗ್ಗ: ವಚನ ಚಳವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಂಗತಿಗೆ ಶಿವಮೊಗ್ಗ ನಗರ ಸಾಕ್ಷಿಯಾಗಲಿದೆ. ನಗರದ ಅಲ್ಲಮಪ್ರಭು ಬಯಲಿನಲ್ಲಿ ಏಕಕಾಲದಲ್ಲಿ ಒಂದು ಸಾವಿರ ವಚನಗಳನ್ನು ಹಾಡುವ ‘ಸಾವಿರದ ವಚನ’ ಕಾರ್ಯಕ್ರಮ ಮೇ 9ರಂದು ಸಂಜೆ 5.30ಕ್ಕೆ ನಡೆಯಲಿದೆ ಎಂದು ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಸ್‌.ರುದ್ರೇಗೌಡ ಹೇಳಿದರು.

ಶಿವಮೊಗ್ಗ: ವಚನ ಚಳವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಂಗತಿಗೆ ಶಿವಮೊಗ್ಗ ನಗರ ಸಾಕ್ಷಿಯಾಗಲಿದೆ. ನಗರದ ಅಲ್ಲಮಪ್ರಭು ಬಯಲಿನಲ್ಲಿ ಏಕಕಾಲದಲ್ಲಿ ಒಂದು ಸಾವಿರ ವಚನಗಳನ್ನು ಹಾಡುವ ‘ಸಾವಿರದ ವಚನ’ ಕಾರ್ಯಕ್ರಮ ಮೇ 9ರಂದು ಸಂಜೆ 5.30ಕ್ಕೆ ನಡೆಯಲಿದೆ ಎಂದು ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಸ್‌.ರುದ್ರೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕಾಗಿ ಅಲ್ಲಮ ಬಯಲಿನಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಅಲ್ಲಮಪ್ರಭು ಬಯಲಿನಲ್ಲಿ 260 ಅಡಿ ಅಗಲ ಹಾಗೂ 7 ಮೆಟ್ಟಿಲುಗಳ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಕಾರ್ಯಕ್ರಮಕ್ಕೆ ೭-೮ ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅಂದು ಕಾರ್ಯಕ್ರಮಕ್ಕೆ ಬರುವವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಅಣ್ಣ ಬಸವಣ್ಣನವರ ಹಾಗೂ ಇತರ ಶರಣರ ತತ್ವಗಳು ಹಿಂದೆಂದಿಗಿಂತಲೂ ಇಂದು ಮನುಕುಲಕ್ಕೆ ಅತ್ಯಗತ್ಯವಾಗಿಬೇಕಾಗಿವೆ. ಆ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ‘ಸಾವಿರದ ವಚನ’ ಕಾರ್ಯಕ್ರಮ ಯಾವುದೋ ಒಂದು ಜಾತಿಗೆ ಸೀಮಿತವಾದ ಉತ್ಸವವಲ್ಲ. ಬದಲಿಗೆ ಬಸವತತ್ವ ಆರಾಧಕರ, ಒಪ್ಪುವವರ ಉತ್ಸವ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಚನಗಳನ್ನು ಹಾಡುವವರಿಗಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಕೋರಿಕೊಳ್ಳಲಾಗಿತ್ತು. ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ದೂರದ ಊರುಗಳಾದ ಚೆನ್ನೈ, ಬೆಂಗಳೂರು, ಕೊಪ್ಪಳ, ಹುಬ್ಬಳ್ಳಿ, ವಿಜಯಪುರ, ರಾಯಚೂರು, ಬೀರೂರು, ದಾವಣಗೆರೆ, ಶಿರಾಳಕೊಪ್ಪ, ಶಿಕಾರಿಪುರ, ತರೀಕೆರೆ, ಭದ್ರಾವತಿ ಹಾಗೂ ಇನ್ನೂ ಹಲವು ಊರುಗಳಿಂದ ಗಾಯಕರು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಿ. ಅಶ್ವಥ್ ಅವರ ರಾಗ ಸಂಯೋಜನೆಯಲ್ಲಿ ಗಾಯಕರಾಗಿ ಹಾಡಿದ್ದ ಮೈಸೂರಿನ ಜನಾರ್ದನ್(ಜನ್ನಿ), ಶಿವಮೊಗ್ಗದ ಕೆ.ಯುವರಾಜ್, ಸಿ.ಅಶ್ವಥ್ ಅವರ ಸಹಾಯಕರಾಗಿದ್ದ ಬೆಂಗಳೂರಿನ ಸುದರ್ಶನ್, ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್ ಕಾರ್ಯಕ್ರಮಕ್ಕೆ ಜೊತೆಯಾಗಿದ್ದಾರೆ. ಶಿವಮೊಗ್ಗದ ಪ್ರಖ್ಯಾತ ಸಂಗೀತ ವಿದ್ವಾಂಸರು ಒಟ್ಟಾಗಿ ತರಬೇತಿ ಹಾಗೂ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ವಿದ್ವಾನ್ ನಾಗರಾಜ್ ಗುರುಗುಹ, ಜಯಶ್ರೀ ಶ್ರೀಧರ್, ನಾಗರತ್ನ ಟಿ.ಜೆ., ಪ್ರಹ್ಲಾದ್ ದೀಕ್ಷಿತ್, ಸುರೇಖಾ ಹೆಗ್ಡೆ, ಮಹೇದ್ರ ಗೋರೆ, ವಿನಯ್ ಯಜ್ಞನಾರಾಯಣ, ಉಮಾ ದಿಲೀಪ್ ಹಾಗೂ ಇನ್ನು ಹಲವು ಸಂಗೀತ ವಿದ್ವಾಂಸರು ಸಾವಿರಾರು ಜನರಿಗೆ ಕಳೆದ ಹತ್ತಾರು ದಿನಗಳಿಂದ ತರಬೇತಿ ನೀಡುತ್ತಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಯಂತಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಸಮಿತಿಯ ಖಜಾಂಚಿ ಎಚ್.ಸಿ.ಯೋಗೀಶ್, ಡಾ.ಧನಂಜಯ ಸರ್ಜಿ, ತಮ್ಮಡಿಹಳ್ಳಿ ನಾಗರಾಜ್, ಮೋಹನ್ ಬಾಳೆಕಾಯಿ, ಸಿದ್ದೇಶ್, ಕಿರಣ್, ಶಂಕರಪ್ಪ, ಬಳ್ಳೆಕೆರೆ ಸಂತೋಷ್ ಇನ್ನಿತರರು ಇದ್ದರು.