ಕನ್ನಡಪ್ರಭ ವಾರ್ತೆ ಹಾಸನ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಶನಿವಾರದಿಂದ ಜಿಲ್ಲೆಯಾದ್ಯಂತ ಆರಂಭಗೊಂಡಿವೆ. ಮೊದಲ ದಿನ ಕನ್ನಡ ಭಾಷೆ ಪರೀಕ್ಷೆ ನಡೆಯಿತು. ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಕೇಂದ್ರಗಳ ಆವರಣದಲ್ಲಿ ಅಲ್ಲಲ್ಲಿ ಕುಳಿತು ಕೊನೆಯ ಕ್ಷಣದ ಪುನರಾವಲೋಕನದಲ್ಲಿ ತೊಡಗಿದ್ದ ದೃಶ್ಯ ಗಮನ ಸೆಳೆಯಿತು. ಕೆಲವರು ಪಠ್ಯಪುಸ್ತಕ ಹಿಡಿದು ಶಾಂತವಾಗಿ ಓದುತ್ತಿದ್ದರೆ, ಇನ್ನೂ ಕೆಲವರು ಸ್ನೇಹಿತರೊಂದಿಗೆ ಚರ್ಚೆ ನಡೆಸುತ್ತಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.ಫೆಬ್ರವರಿ ೨೮ರಿಂದ ಮಾರ್ಚ್ ೧೭ರವರೆಗೆ ನಡೆಯಲಿರುವ ಈ ಪರೀಕ್ಷೆಗೆ ಹಾಸನ ಜಿಲ್ಲೆಯ ಒಟ್ಟು ೧೫,೭೮೨ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ ೧೪,೭೫೯ ಹೊಸ ವಿದ್ಯಾರ್ಥಿಗಳು, ೩೦೫ ಖಾಸಗಿ ಅಭ್ಯರ್ಥಿಗಳು, ೭೧೫ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೩ ಫಲಿತಾಂಶ ಉನ್ನತೀಕರಣ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿಭಾಗವಾರು ವಿವರದಲ್ಲಿ ಕಲಾ ವಿಭಾಗದಲ್ಲಿ ೨,೫೯೪, ವಾಣಿಜ್ಯ ವಿಭಾಗದಲ್ಲಿ ೫,೩೧೭ ಹಾಗೂ ವಿಜ್ಞಾನ ವಿಭಾಗದಲ್ಲಿ ೬,೮೪೮ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಮಹತ್ವದ ಪರೀಕ್ಷೆಯಾಗಿರುವುದರಿಂದ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೆಬ್‌ಕಾಸ್ಟಿಂಗ್ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನೇರ ನಿಗಾವಹಿಸಲಾಗುತ್ತಿದೆ. ಯಾವುದೇ ಅಕ್ರಮ ನಡೆಯದಂತೆ ವಿಶೇಷ ವೀಕ್ಷಕ ತಂಡಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ತಮ್ಮ ಮಗನನ್ನು ಪರೀಕ್ಷೆಗೆ ಬಿಡಲು ಬಂದಿದ್ದ ಸಾಮಾಜಿಕ ಹೋರಾಟಗಾರ ರಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯಲು ಸಂತೋಷದಿಂದ ಬಂದಿದ್ದು, ಮಕ್ಕಳು ಮನೆಯಲ್ಲಿ ಶ್ರದ್ಧೆಯಿಂದ ಓದಿದ್ದರೆ ಪರೀಕ್ಷೆ ಬರೆಯಲು ಯಾವುದೇ ಆತಂಕ ಇರುವುದಿಲ್ಲ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಮತ್ತು ಇತರೆ ಮನರಂಜನೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ದುಃಖಕರ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಪ್ರೀತಿಯಿಂದ ಓದಿದರೆ ಭವಿಷ್ಯದಲ್ಲಿ ತಲೆ ಎತ್ತಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಬಹುದು ಎಂದು ಸಲಹೆ ನೀಡಿದರು. ಪರೀಕ್ಷಾ ಕೇಂದ್ರಗಳ ಬಳಿ ಪಾಲಕರೂ ಕೂಡ ಆತಂಕ ಮತ್ತು ನಿರೀಕ್ಷೆಗಳೊಂದಿಗೆ ಮಕ್ಕಳಿಗೆ ಹಾರೈಕೆಗಳನ್ನು ತಿಳಿಸುತ್ತಿರುವ ದೃಶ್ಯ ಕಂಡುಬಂದಿತು. ಮೊದಲ ದಿನದ ಪರೀಕ್ಷೆ ಶಾಂತಿಯುತವಾಗಿ ನಡೆಯಿತು.