ಪರಿಸರ ರಕ್ಷಣೆಗಾಗಿ ಸೀಡ್‌ಬಾಲ್ ಕ್ಯಾಂಪೇನ್

| Published : Jul 15 2024, 01:49 AM IST

ಸಾರಾಂಶ

ಪರಿಸರ ರಕ್ಷಣೆಯ ಉದ್ದೇಶದಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ವತಿಯಿಂದ ಸೀಡ್‌ಬಾಲ್ ಕ್ಯಾಂಪೇನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಂದ ತಯಾರಾದ ೮೦೦೦ಕ್ಕೂ ಅಧಿಕ ಸೀಡ್‌ಬಾಲ್‌ಗಳನ್ನು ಅರಸೀಕೆರೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಿಗೆ ಎಸೆದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ವತಿಯಿಂದ ಪರಿಸರ ರಕ್ಷಣೆಯ ಉದ್ದೇಶದಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸೀಡ್‌ಬಾಲ್ ಕ್ಯಾಂಪೇನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಮೂಲಕ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ೮೦೦೦ಕ್ಕೂ ಹೆಚ್ಚಿನ ಸೀಡ್‌ಬಾಲ್‌ಗಳನ್ನು ತಯಾರು ಮಾಡಿರುತ್ತಾರೆ. ಈ ಕಾರ್ಯದಲ್ಲಿ ಶಾಲೆಯ ಅಧ್ಯಕ್ಷರು, ಪ್ರಾಂಶುಪಾಲರು, ಸಿಬ್ಬಂಧಿ ವರ್ಗ, ವಿದ್ಯಾರ್ಥಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಆರ್. ಅನಂತಕುಮಾರ್ ಮಾತನಾಡಿ, ಈ ಕಾರ್ಯಕ್ರಮವು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೇರು ಮಟ್ಟದಿಂದಲೇ ಬೆಳೆಯುವಂತೆ ಮಾಡಿ, ಪರಿಸರ ರಕ್ಷಣೆ ಮೂಲಕ ಪ್ರಸ್ತುತ ಹಾಗೂ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳು ಸ್ವತಃ ತಾವೇ ಮಾಡಿದ ಸೀಡ್‌ ಬಾಲ್‌ಗಳನ್ನು ಪರಿಸರಕ್ಕೆ ಅರ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಂದ ತಯಾರಾದ ೮೦೦೦ಕ್ಕೂ ಅಧಿಕ ಸೀಡ್‌ಬಾಲ್‌ಗಳನ್ನು ಅರಸೀಕೆರೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಾದ ನಾಗಪುರಿ ಅರಣ್ಯ , ಬೆಲವತ್ತಹಳ್ಳಿ ಅರಣ್ಯ, ಜಾಜೂರು ಸಸ್ಯ ಕ್ಷೇತ್ರ ಮುಂತಾದ ಕಡೆಗಳಲ್ಲಿ ಎಸೆಯುವ ಮೂಲಕ ಅರಣ್ಯ ಪ್ರದೇಶಗಳಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸಿ ಆ ಹಸಿರು ಅರಣ್ಯದ ಮೂಲಕ ಪ್ರಾಣಿ ಪಕ್ಷಿಗಳಿಗೆ ನೆರವಾಗುವ ಹಾಗೂ ಮಾನವನ ಭವಿಷ್ಯಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಅನಂತ್ ಇಂಟರ್‌ನ್ಯಾಷನಲ್ ಶಾಲೆಯು ಮುನ್ನುಡಿ ಬರೆದಿದೆ.