ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಕ್ಫ್ ಹೋರಾಟ ಸಮಿತಿ ಮತ್ತು ಹಿರಿಯ ನಾಗರಿಕರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಕರೆ ನೀಡಲಾಗಿದ್ದ ಸ್ವಯಂಪ್ರೇರಿತ ಅರಸೀಕೆರೆ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಸೋಮವಾರ ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳು, ಸಿನಿಮಾ ಮಂದಿರಗಳು, ಕೃಷಿ ಮಾರುಕಟ್ಟೆ ಬಂದ್ ಬೆಂಬಲ ಕೊಟ್ಟರೆ, ಆಟೋ ಸಂಚಾರ ಬಸ್ ಸಂಚಾರ ಎಂದಿನಂತಿತ್ತು. ಕರಿಯಮ್ಮ ದೇವಸ್ಥಾನದ ಆವರಣದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಮೆರವಣಿಗೆ ನಡೆಸಿದರು. ಕರಿಯಮ್ಮ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸಾಯಿನಾಥ ರತ್ತೆ ಶಾನುಭೋಗರ ಬೀದಿ ಹಾಗೂ ಪೇಟೆ ಬೀದಿ ಮತ್ತು ರಾಷ್ಟ್ರೀಯ ಹೇದ್ದಾರಿಯ ಮೂಲಕ ಬಸವೇಶ್ವರ ವೃತ್ತ ವೃತ್ತ ತಲುಪಿ ಅಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಯಿತು.
ವಕ್ಫ್‌ಗೆ ರೈತನ ಜಮೀನು ಮಠಮಾನ್ಯಗಳು, ಆಸ್ತಿ, ಕಟ್ಟಡ, ನಿವೇಶನ, ದೇವಾಲಯಗಳ ಆಸ್ತಿಗಳು, ಹಳ್ಳಿಗಳು, ಸ್ಮಶಾನಗಳು , ಸರ್ಕಾರಿ ಕಟ್ಟಡ ಸರ್ಕಾರಿ ಆಸ್ತಿಯನ್ನು ಕಬಳಿಸುವ ಕಾನೂನಿನ ಅಧಿಕಾರವನ್ನು ಹಿಂದಿನ ಕಾಂಗ್ರೆಸ್ ಸರ್ಕಾರಗಳು ನೀಡಿದೆ ಎಂದು ರಂಗಭೂಮಿ ಕಲಾವಿದ ಕರಿಯಪ್ಪ ಆರೋಪಿಸಿದರು. ನಗರದ ರುದ್ರಗುಡಿ ಬೀದಿಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಜವಾಹರ್ ಲಾಲ್ ನೆಹರೂ ಅವರ ತಾತ ಮೂಲತಃ ಒಬ್ಬ ಮುಸ್ಲಿಮ್ ಆಗಿದ್ದು ಅವರ ಋಣವನ್ನು ತೀರಿಸಲು ಈ ರೀತಿಯ ಕಾನೂನಿನಲ್ಲಿ ಅವಕಾಶ ನೀಡಿ ವಕ್ಫ್ ಆಸ್ತಿ ಹೆಚ್ಚಾಗಿದೆ ಎಂದರು.1950ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಂಡಿಸಿದ ಸಂವಿಧಾನದಲ್ಲಿ ವಕ್ಫ್ ಎಂಬ ಪದವೇ ಇರಲಿಲ್ಲ. ಸಾಮಾನ್ಯ ಕಾಯ್ದೆಯಾಗಿದ್ದ ವಕ್ಫ್‌ಗೆ ಮತ್ತೊಂದು ಶಕ್ತಿ ತುಂಬಿದವರು 1982ರಲ್ಲಿ ಪ್ರಧಾನಿ ಇಂದಿರಾಗಾಂಧಿ ಹಾಗೂ 1984ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ. ತಿದ್ದುಪಡಿ ತರುವ ಮೂಲಕ ಕಾಯ್ದೆಗೆ ಶಕ್ತಿ ತುಂಬಿದರು. 1993ರಲ್ಲಿ ಪ್ರಧಾನಿಯಾಗಿದ್ದ ಟಿವಿ ನರಸಿಂಹ ಈ ಕಾಯ್ದೆಗೆ ವಿಶೇಷ ಅಧಿಕಾರ ನೀಡಿ ವಕ್ಫ್ ನ್ಯಾಯಾಲಯ ಜಾರಿಗೆ ಬರುವಂತೆ ಮಾಡಿದರು. ಯಾವುದೇ ತಂಟೆ ತಕರಾರುಗಳು ಕೆಳಗಿನ ಕೋರ್ಟಿನಿಂದ ಸುಪ್ರೀಂಕೋರ್ಟಿನವರಿಗೆ ವಿಚಾರಣೆಗಳು ನಡೆಯುತ್ತವೆ. ಆದರೆ ಯಾವುದೇ ತಕರಾದಿದ್ದರೂ ವಕ್ಫ್ ಮಂಡಳಿಯ ಸದಸ್ಯರು ಕೈಗೊಳ್ಳುವ ನಿರ್ಧಾರಗಳೇ ಅಂತಿಮವಾಗಿರುತ್ತದೆ. ಈ ರೀತಿಯ ಭಯಾನಕ ಬಹಿರಂಗ ಭೂಕಬಳಿಕೆ ಮತ್ತು ಭಯಾನಕ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಮನೆಗೊಬ್ಬ ದೇಶದ ಗಡಿಗೊಬ್ಬ ಮಕ್ಕಳನ್ನು ಕೊಡಿ. ನಿಮ್ಮ ಆಸ್ತಿ ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಒಗ್ಗಟ್ಟಾಗಿ, ಹೆಚ್ಚು ಮಕ್ಕಳನ್ನು ಹೆರುವ ಮೂಲಕ ದೇಶ ಮತ್ತು ಹಿಂದುತ್ವ ರಕ್ಷಣೆ ಸಾಧ್ಯ ಎಂದು ಶ್ರೀ ಜ್ಞಾನಪ್ರಭು ದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.ಒಂದು ದೇಶ ಒಂದು ಕಾನೂನು ಇರಬೇಕು. ಯಾವ ಸಮುದಾಯವೂ ಹೆಚ್ಚಲ್ಲ ಒಂದು ಸಮುದಾಯವನ್ನು ಸರಕಾರ ಓಲೈಸುವುದು ತರವಲ್ಲ ಎಂದು ಸಹ ಅವರು ನುಡಿದರು. ಇಂದು ದೇವಾಲಯಗಳ ರೈತರ ಆಸ್ತಿಗಳು ವಕ್ಫ್ ಆಸ್ತಿಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಇವುಗಳ ರಕ್ಷಣೆಗಾಗಿ ಒಂದಾಗುವ ಅಗತ್ಯವಿದೆ. ಇಂದು ನೆರೆ ರಾಷ್ಟ್ರಗಳಲ್ಲಿ ಹಿಂದೂಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದೇಶಕ್ಕೆ ಸಂಚಕಾರ ಬಂದಿದೆ. ಅಂಗಡಿ ಬಾಗಿಲಲ್ಲಿ ನಿಂತು ನೋಡುತ್ತಿದ್ದೀರಿ. ಪ್ರತಿಭಟನಾಕಾರರೊಂದಿಗೆ ನಾಲ್ಕು ಹೆಜ್ಜೆ ಹಾಕುವ ಮನೋಭಾವವನ್ನ ಬೆಳೆಸಿಕೊಳ್ಳಬೇಕು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳ್ಳಬೇಕಿತ್ತು. ನಮ್ಮ ರಕ್ಷಣೆಗಾಗಿ ನಾವು ಜಾಗೃತಿಯ ಸಂಘಟನೆ ಅಗತ್ಯವಿದೆ ಇಂದಿನ ವಿದ್ಯಮಾನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.
ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ರಾಜ್ಯದ ಶಾಸಕರು ಹಿಂದೂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಬೇಕು, ವಕ್ಫ್ ಸಮಿತಿ ಹುಟ್ಟು ಹಾಕಿದ್ದು ಯಾರು ಇಂದು ಅದೇ ಹಲವು ಸಮಸ್ಯೆಗೆ ಕಾರಣವಾಗುತ್ತಿದೆ, ಸ್ವಾತಂತ್ರ್ಯ ಬಂದಾಗ ಈ ಸಮಿತಿ, ಯಾವುದೇ ಆಸ್ತಿಯು ತನ್ನದೆಂದು ಹೇಳಿದರೆ ಅದನ್ನು ಪ್ರಶ್ನಿಸುವಂತಿಲ್ಲ ಇದಂತಹ ಕಾನೂನು. ಸಮಸ್ಯೆ ಪರಿಹಾರಕ್ಕೆ ಸಂಘಟನೆ ಒಂದೇ ಮಾರ್ಗ ಸಂಘಟನೆಗಾಗಿ ಅವರು ಕರೆ ನೀಡಿದರು.ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರ ಶೇಖರ ಸ್ವಾಮೀಜಿ ಮಾತನಾಡಿದರು. ಮೆರವಣಿಗೆಯಲ್ಲಿ ಮಾಡಾಳು ಮೇಟಿಕುರ್ಕೆ ಗೋಳಗುಂದ ಮಠಗಳ ಶ್ರೀಗಳು ಪ್ರತಿಭಟನಾಕಾರೊಂದಿಗೆ ಹೆಜ್ಜೆ ಹಾಕಿ ಆತ್ಮಸ್ಥೈರ್ಯ ತುಂಬಿದರು. ಸಾವಿರಾರು ಪ್ರತಿಭಟನಾಕಾರರು ಹಿಂದೂ ಧ್ವಜ ಹಿಡಿದು ದೇಶಾಭಿಮಾನ ಜೈಕಾರ ಕೂಗುತ್ತಾ ಸಾಗಿದರು. ಶಾಂತಿಯುತವಾಗಿ ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿ ನಡೆಸಲಾಯಿತು.