ಭರತ ಖಂಡದ ಚಾರಿತ್ರಿಕ ಪುರುಷ ಸಂತ ಸೇವಾಲಾಲ್: ನಗರಸಭೆಯ ಸುಜಾತ ಶಿವಕುಮಾರ್‌

| Published : Feb 16 2025, 01:50 AM IST

ಸಾರಾಂಶ

ಭರತ ಖಂಡದ ಚಾರಿತ್ರಿಕ ಪುರುಷ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.

ಚಿಕ್ಕಮಗಳೂರಿನಲ್ಲಿ ಸಂತ ಸೇವಾಲಾಲ್‌ ಜಯಂತಿ । ಜಿಲ್ಲಾಡಳಿತದಿಂದ ಆಯೋಜನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭರತ ಖಂಡದ ಚಾರಿತ್ರಿಕ ಪುರುಷ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂತ ಸೇವಾಲಾಲರು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ಜನಿಸಿದರು. ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ, ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದವರು. ತಮ್ಮ ಜೀವನದ ಅನುಭವವನ್ನು ತಮ್ಮ ತತ್ತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದ ಮಹಾಪುರುಷ ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಕೆ. ಶ್ರೀನಿವಾಸ್ ಅವರು ಉಪನ್ಯಾಸ ನೀಡಿ, ಮಾನವ ಜನ್ಮ ಪವಿತ್ರವಾದದ್ದು, ಇದನ್ನು ಹಾಳು ಮಾಡಿಕೊಳ್ಳಬಾರದು, ವ್ಯಸನಗಳಿಂದ ದೂರವಿರಬೇಕು. ಹರಿಷಡ್ ವರ್ಗಗಳನ್ನು ಸುಟ್ಟು ಹಾಕಿ ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಎಂದು ಸಾರಿದವರು ಸಂತ ಸೇವಾಲಾಲ್. ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರಿಗೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಹೇಳಿದರಲ್ಲದೆ ಸೇವಾಲಾಲರು ತಮ್ಮ ತತ್ತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಿಸಲು ಪ್ರೇರೇಪಿಸಿದರು ಎಂದರು.

ಮಹಾನೀಯರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಮುನ್ನಡೆದಾಗ ಮಾತ್ರ ನಾವು ಇತರರಿಗೆ ಮಾದರಿಯಾಗಲು ಸಾಧ್ಯ, ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ ಎಂದು ಹೇಳಿದರು.

ಉಪ ತಹಶಿಲ್ದಾರ್ ರಾಮ್ ರಾವ್ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೇವಾಲಾಲರು ದನ ಕಾಯುವ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು ಎಂದು ತಿಳಿಸಿದರು.

ಸೇವಾ ಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಲಲಿತಾ ರವಿನಾಯ್ಕ್, ಸಂತ ನೇವಾಲಾಲ್ ಬಂಜಾರ ಅಭಿವೃದ್ಧಿ ಸಂಘದ ಅಧ್ಯಕ್ಷ ಗಂಗಾಧರ್ ನಾಯ್ಕ್, ಶ್ರೀ ರಾಮ್ ನಾಯ್ಕ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಲಕ್ಷ್ಮಣ್ ಹಾಗೂ ಬಂಜಾರ ಸಮುದಾಯದ ಮುಖಂಡರು ಇದ್ದರು.