ವಕೀಲ ದೇವರಾಜೇಗೌಡರ ಮೇಲೆ ‘ಲೈಂಗಿಕ’ ಪ್ರಕರಣ

| Published : May 10 2024, 11:46 PM IST

ಸಾರಾಂಶ

ವಕೀಲ ದೇವರಾಜೇಗೌಡ ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಮೇ.8 ರಂದು ಅರ್ಜಿ ಸಲ್ಲಿಸಿದ್ದಾರೆ. ಇವರ ಈ ಅರ್ಜಿಯ ವಿಚಾರಣೆಯನ್ನು ಮೇ.15 ಕ್ಕೆ ಮುಂದೂಡಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳಿರುವ ಪೆನ್‌ ಡ್ರೈವ್‌ ಬಹಿರಂಗದ ಆರೋಪ ಎದುರಿಸುತ್ತಿರುವ ವಕೀಲ ದೇವರಾಜೇಗೌಡರ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.

ಏಪ್ರಿಲ್ 1ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ತಮ್ಮ ವಿವಾದಿತ ನಿವೇಶನವನ್ನು ಮಾರಾಟ ಮಾಡಿಸಿಕೊಡುವಂತೆ ಮಹಿಳೆ ದೇವರಾಜೇಗೌಡ ಬಳಿ ಹೋಗಿದ್ದರು. ಈ ವೇಳೆ ತಾನು ಈ ನಿವೇಶನ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಆಗಾಗ ನನಗೆ ಫೋನ್‌ ಮಾಡುತ್ತಿದ್ದರು, ವೀಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸುತ್ತಿದ್ದರು. ಒಮ್ಮೆ ಇದೇ ವಿಚಾರವಾಗಿ ಅವರ ಮನೆಗೆ ಹೋಗಿದ್ದಾಗ ನನ್ನನ್ನು ಹೆದರಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದು, ಈ ದೂರಿನನ್ವಯ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ:

ಈ ಹಿನ್ನೆಲೆಯಲ್ಲಿ ವಕೀಲ ದೇವರಾಜೇಗೌಡ ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಮೇ.8 ರಂದು ಅರ್ಜಿ ಸಲ್ಲಿಸಿದ್ದಾರೆ. ಇವರ ಈ ಅರ್ಜಿಯ ವಿಚಾರಣೆಯನ್ನು ಮೇ.15 ಕ್ಕೆ ಮುಂದೂಡಲಾಗಿದೆ.

ಹಾಗೆಯೇ ದೇವರಾಜೇಗೌಡ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ಹನಿಟ್ರ್ಯಾಪ್ ಆರೋಪದಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕೇಸ್ ನೀಡಿರುವುದಾಗಿಯೂ ತಿಳಿದುಬಂದಿದೆ.

------------------------------------------------

ಸೈಬರ್ ಕ್ರೈಂ ಪೊಲೀಸ್‌ ರಿಂದ ಎಸ್ಐಟಿಗೆ ಹಸ್ತಾಂತರ

ಕನ್ನಡಪ್ರಭ ವಾರ್ತೆ ಹಾಸನ

ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳನ್ನು ಪ್ರಚಾರ ಮಾಡಿದ ಆರೋಪದಲ್ಲಿ ನಗರದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಐವರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಇದೀಗ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

ಪ್ರಜ್ವಲ್ ರೇವಣ್ಣರ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟಿ ಆಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗೂ ಶರತ್‌ ಎಂಬುವವರ ಮೇಲೆ ನಕಲಿ ವೀಡಿಯೋ ಹಂಚಿದ ದೂರನ್ನು ವಕೀಲ ಹಾಗೂ ಜೆಡಿಎಸ್‌ ಮುಖಂಡ ಪೂರ್ಣಚಂದ್ರ ಎಂಬುವವರು ಸೈಬರ್‌ ಕ್ರೈಂ ಠಾಣೆಯಲ್ಲಿ ಏಪ್ರಿಲ್‌ 23 ರಂದು ದಾಖಲಿಸಿದ್ದರು. ಹಾಗಾಗಿ ಆರೋಪಿತರು ಹಾಸನದ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ತಳ್ಳಿಹಾಕಿತ್ತು. ಆದಾಗ್ಯೂ ಅವರನ್ನು ಬಂಧಿಸಿಲ್ಲ. ಇದರಲ್ಲಿ ಸ್ಥಳೀಯ ಪೊಲೀಸರು ಪ್ರಭಾವಕ್ಕೆ ಒಳಗಾಗಿ ಅವರನ್ನು ಬಂಧಿಸುತ್ತಿಲ್ಲ. ಆದ್ದರಿಂದ ಈ ಪ್ರಕರಣವನ್ನು ಎಸ್‌ಐಟಿಗೆ ಹಸ್ತಾಂತರಿಸಬೇಕು ಎಂದು ಜೆಡಿಎಸ್‌ ಮುಖಂಡರು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣ ಸೈಬರ್‌ ಠಾಣೆಯಿಂದ ಎಸ್‌ಐಟಿಗೆ ವರ್ಗಾವಣೆಯಾಗಿದ್ದು, ಸಂತ್ರಸ್ತ ಮಹಿಳೆ ಅಪಹರಣದ ಆರೋಪದಲ್ಲಿ ಎಚ್‌.ಡಿ.ರೇವಣ್ಣ ಅವರ ಬಂಧನವಾದಂತೆ ಇವರನ್ನು ಕೂಡ ಎಸ್‌ಐಟಿ ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾದ್ಯತೆ ಇದೆ.

--------------------

ಎಸ್ಐಟಿಗೆ ಹಾಸನದ ಪೊಲೀಸ್ ಅಧಿಕಾರಿಗಳ ನಿಯೋಜನೆ

ಕನ್ನಡಪ್ರಭ ವಾರ್ತೆ ಹಾಸನ

ಪೆನ್‌ಡ್ರೈವ್‌ ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ಎಸ್‌ಐಟಿ ಗೆ ನೆರವಾಗಲೆಂದು ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಎಎಸ್ಪಿ ತಮ್ಮಯ್ಯ, ಸೈಬರ್‌ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್, ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆಯ ಪಿಎಸ್ ಐ ಶ್ರೀನಿವಾಸ್ ಹಾಗು ಇಬ್ಬರು ಸಿಬ್ಬಂದಿಯನ್ನು ಒಒಡಿ ಆಧಾರದಲ್ಲಿ ಮುಂದಿನ ಆದೇಶದವರೆಗೆ ತನಿಖಾ ತಂಡದಲ್ಲಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿ‌ ಎಸ್ ಐ ಟಿಗೆ ನಿಯೋಜನೆ ಮಾಡಲಾಗಿದೆ.