ಯಾವುದೇ ಕಾರಣಕ್ಕೆ ‘ಶಕ್ತಿ’ ಯೋಜನೆ ನಿಲ್ಲಿಸುವುದಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

| Published : Nov 01 2024, 12:13 AM IST

ಯಾವುದೇ ಕಾರಣಕ್ಕೆ ‘ಶಕ್ತಿ’ ಯೋಜನೆ ನಿಲ್ಲಿಸುವುದಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲ ಆಗಿದೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಸಂಸ್ಥೆಯ ನಿಗಮಗಳು ಒಳ್ಳೆಯ ಹೆಸರು ಪಡೆದಿದ್ದು, ಉತ್ತಮ ಲಾಭದಲ್ಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ. .

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಕರ್ನಾಟಕ ಮಾಡೆಲ್ ಆಗುತ್ತಿವೆ, ಹಾಗಿರುವಾಗ ಯಾವುದೇ ಕಾರಣಕ್ಕೂ ಅವುಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲ ಆಗಿದೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಸಂಸ್ಥೆಯ ನಿಗಮಗಳು ಒಳ್ಳೆಯ ಹೆಸರು ಪಡೆದಿದ್ದು, ಉತ್ತಮ ಲಾಭದಲ್ಲಿವೆ. ಯಾರೋ ಒಂದಿಬ್ಬರು ಮಹಿಳ‍ೆಯರು ಯೋಜನೆ ನಿಲ್ಲಿಸಿ ಎಂದು ಹೇಳಿದಾಕ್ಷಣ ಯೋಜನೆ ನಿಲ್ಲಿಸಲು ಸಾಧ್ಯವೇ ? ದೇವರು ಅವರಿಗೆ ಅನುಕೂಲ ಕೊಟ್ಟಿರಬಹುದು, ಅವರು ಉಚಿತವಾಗಿ ಬಸ್ ಪ್ರಯಾಣ ಮಾಡುವುದನ್ನು ಬಿಡಲಿ ಎಂದರು.

ಮಹಿಳೆಯರ ಜೊತೆ ಚರ್ಚೆ ಸಂವಾದ ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದವರು ಡಿಸಿಎಂ ಡಿ.ಕೆ.ಶಿ ವಕುಮಾರ್, ಅವರ ಕಲ್ಪನೆಯ ಈ ಯೋಜನೆ ನಿಲ್ಲಿಸಲಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದರು. ರೈತರಿಗೆ ಅನ್ಯಾಯವಾಗುವುದಿಲ್ಲ: ವಕ್ಫ್ ಮಂಡಳಿಗೆ ಜಮೀನು ಬಿಟ್ಟು ಕೊಡುವಂತೆ ರೈತರಿಗೆ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಗಿದೆ, ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದು, ರೈತರ ಒಂದು ಇಂಚೂ ಜಾಗವನ್ನೂ ವಕ್ಫ್‌ಗೆ ಬಿಟ್ಟು ಕೊಡುವುದಿಲ್ಲ. ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆಯುವುದಾಗಿ ಹೇಳಿದ್ದಾರೆ. ನಾನು ಕೂಡ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಜಾತಿ ಗಣತಿ ಬಗ್ಗೆ ಆದಷ್ಟು ಬೇಗ ಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ಹೆಬ್ಬಾಳ್ಕರ್‌ ಹೇಳಿದರು.