ಜೆಡಿಎಸ್ ತವರಲ್ಲಿ ಡಿಸೆಂಬರ್‌ 5ಕ್ಕೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ

| Published : Nov 24 2024, 01:46 AM IST

ಜೆಡಿಎಸ್ ತವರಲ್ಲಿ ಡಿಸೆಂಬರ್‌ 5ಕ್ಕೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಜೆಡಿಎಸ್‌ಗೆ ತಿರುಗೇಟು ನೀಡುವ ಹಿನ್ನೆಲೆಯಲ್ಲಿ ಜೆಡಿಎಸ್‌ ತವರಲ್ಲೇ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ಸಿದ್ಧತೆ ಈಗಾಗಲೇ ಶುರುವಾಗಿದ್ದು, ಶನಿವಾರ ನಗರದಲ್ಲಿ ನಾಲ್ವರು ಸಚಿವರು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ್ದಾರೆ. ಡಿಸೆಂಬರ್‌ 5ರಂದು ನಗರದಲ್ಲಿ ಸಿದ್ಧರಾಮಯ್ಯ ಸ್ವಾಭಿಮಾನಿ ಸಂಘದಿಂದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಜೆಡಿಎಸ್‌ಗೆ ತಿರುಗೇಟು ನೀಡುವ ಹಿನ್ನೆಲೆಯಲ್ಲಿ ಜೆಡಿಎಸ್‌ ತವರಲ್ಲೇ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ಸಿದ್ಧತೆ ಈಗಾಗಲೇ ಶುರುವಾಗಿದ್ದು, ಶನಿವಾರ ನಗರದಲ್ಲಿ ನಾಲ್ವರು ಸಚಿವರು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ್ದಾರೆ.

ಉಪ ಚುನಾವಣೆ ಫಲಿತಾಂಶದ ದಿನವೇ ಜಿಲ್ಲಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ ಹಾಗೂ ಸಣ್ಣ ನೀರಾವರಿ ಸಚಿವರಾದ ಬೋಸರಾಜು ಅವರು ಆಗಮಿಸುವರು ಎಂದು ಸಚಿವರ ಕೇಂದ್ರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಅಧಿಕೃತ ಪ್ರವಾಸದ ಸುತ್ತೋಲೆ ಬಂದಿತ್ತು. ಅದರಂತೆ ಶನಿವಾರ ಮಧ್ಯಾಹ್ನವೇ ಸಚಿವರಾದ ಬೋಸರಾಜು ಆಗಮಿಸಿದ್ದರು. ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ ಕೂಡ ಬಂದರು. ನಂತರ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವರಾದ ವೆಂಕಟೇಶ್‌ ಕೂಡ ಆಗಮಿಸಿದರು. ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಸಂಸದರಾದ ಶ್ರೇಯಸ್‌ ಪಟೇಲ್‌, ಅರಸೀಕೆರೆ ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆದ ಕೆ.ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಗೋಪಾಲಸ್ವಾಮಿ ಸೇರಿದಂತೆ ಜಿಲ್ಲೆಯ ಪ್ರಮುಖ ಮುಖಂಡರೊಂದಿಗೆ ಸಮಾವೇಶದ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿ ಡಿಸೆಂಬರ್‌ 5ರಂದು ನಗರದಲ್ಲಿ ಸಿದ್ಧರಾಮಯ್ಯ ಸ್ವಾಭಿಮಾನಿ ಸಂಘದಿಂದ ಸಮಾವೇಶ ನಡೆಸಲು ನಿರ್ಧರಿಸಲಾಯಿತು.

ಉಪ ಚುನಾವಣೆ ಅಥವಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಜೆಡಿಎಸ್‌ ಶಕ್ತಿಕೇಂದ್ರವಾದ ಹಾಸನ ಜಿಲ್ಲೆಯಲ್ಲಿ ಸಿದ್ಧರಾಮಯ್ಯ ಅವರ ಶಕ್ತಿ ಪ್ರದರ್ಶನ ಮಾಡಬೇಕೆನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ, ಇದೀಗ ಉಪಚುನಾವಣೆ ನಡೆದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿರುವ ಬೆನ್ನಲ್ಲೇ ಈ ಸಮಾವೇಶಕ್ಕೆ ಶರವೇಗ ಸಿಕ್ಕಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್‌ ಮುಖಂಭಂಗ ಅನುಭವಿಸಿರುವ ಈ ಸಮಯದಲ್ಲೇ ಹಾಸನದಲ್ಲಿ ಸಿದ್ದರಾಮಯ್ಯ ಅವರು ಸಮಾವೇಶ ನಡೆಸಿದ ತಮ್ಮ ಶಕ್ತಿ ಪ್ರದರ್ಶನ ಮಾಡುವ ಜತೆಗೆ ಜೆಡಿಎಸ್‌ಗೆ ಗಾಯದ ಮೇಲೆ ಉಪ್ಪು ಸುರಿದಂತೆ ಮಾಡಿ ಶಾಕ್‌ ಕೊಡುವ ನಿಟ್ಟಿನಲ್ಲಿ ಈ ಸಮಾವೇಶ ಮಾಡಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.

5 ಜಿಲ್ಲೆಗಳು: ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳನ್ನೊಳಗೊಂಡು ಸ್ವಾಭಿಮಾನಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ನಗರದ ಅರಸೀಕೆರೆ ರಸ್ತೆಯಲ್ಲಿರುವ ಕೃಷ್ಣ ನಗರದ ವಿಶಾಲ ಜಾಗದಲ್ಲಿ ಬೃಹತ್‌ ಪೆಂಡಾಲ್‌ ಹಾಕಿ ಸಮಾವೇಶ ನಡೆಸಲು ಸ್ಥಳ ಗುರ್ತಿಸಲಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಸ್ಥಳ ಪರಿಶೀಲನೆ ನಡೆಸಿದರು.

ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಮಾಡಲು ಅವರ ಅಭಿಮಾನಿಗಳು ತಮ್ಮನ್ನು ಭೇಟಿ ಮಾಡಿ ಕೇಳಿಕೊಂಡಿದ್ದಾರೆ. ಇದು ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಸಿದ್ಧರಾಮಯ್ಯ ಸ್ವಾಭಿಮಾನಿ ಸಂಘದ ಸದಸ್ಯರು ಸಮಾವೇಶ ಮಾಡಲು ಹೊರಟಿದ್ದಾರೆ. ಅವರಿಗೆ ಬೆಂಬಲ ಕೊಡಲು ನಾವು ಸಿದ್ದರಿದ್ದೇವೆ. ಸಾಮಾಜಿಕ ಚಳುವಳಿ ಸಂಘಟನೆಗೆ ಒತ್ತು‌ ಕೊಡಲು ಸಮಾವೇಶ ಮಾಡುತ್ತಿದ್ದೇವೆ. ಈ ಹಿಂದೆ 2005ರಲ್ಲಿ ಹಾಸನದಲ್ಲಿಯೇ ಸಿದ್ಧರಾಮಯ್ಯ ಅವರು ಅಹಿಂದ ಸಮಾವೇಶ ಮಾಡಿದ್ದರು. ಅದೇ ರೀತಿ ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.