ಸಂಸ್ಕಾರ ಕಲಿತವ ಭ್ರಷ್ಟನಾಗಲಾರ

| Published : Feb 05 2024, 01:45 AM IST

ಸಾರಾಂಶ

ಈ ಹಿಂದೆ ಭಾರತ ಹಾವಾಡಿಗರ ದೇಶ ಎಂದು ವಿದೇಶಿಗರು ಹಂಗಿಸುತ್ತಿದ್ದರು. ಆದರೆ, ಇಂದು ಭಾರತ ವಿಶ್ವಗುರುವಾಗಿ ಬೆಳಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿನ ಶಿಕ್ಷಣ ಮತ್ತು ಸಂಸ್ಕಾರ.

ಕನ್ನಡಪ್ರಭ ವಾರ್ತೆ ಅಥಣಿಶಿಕ್ಷಣ ಸಂಸ್ಥೆಗಳು ಅಂದರೆ ಕೇವಲ ಕಟ್ಟಡಗಳಲ್ಲ, ಅವು ಜ್ಞಾನ ದೇಗುಲ. ಮಕ್ಕಳಿಗೆ ಅಕ್ಷರದ ಅರಿವು ಮೂಡಿಸುವ ಮೂಲಕ ಉತ್ತಮ ಸಂಸ್ಕಾರದ ಜೊತೆಗೆ ದೇಶದ ಸಂಸ್ಕೃತಿ ಕಲಿಸುವುದೇ ಶಿಕ್ಷಣವಾಗಿದೆ ಎಂದು ಶೇಗುಣಸಿಯ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಅವರು ಭಾನುವಾರ ತಾಲೂಕಿನ ಸಂಕೋನಟ್ಟಿ ಗ್ರಾಮದ ಶ್ರೀ ವರ್ಧಮಾನ ಶಿಕ್ಷಣ ಸಂಸ್ಥೆ ರಜತ ಮಹೋತ್ಸವ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಹಿಂದೆ ಭಾರತ ಹಾವಾಡಿಗರ ದೇಶ ಎಂದು ವಿದೇಶಿಗರು ಹಂಗಿಸುತ್ತಿದ್ದರು. ಆದರೆ, ಇಂದು ಭಾರತ ವಿಶ್ವಗುರುವಾಗಿ ಬೆಳಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿನ ಶಿಕ್ಷಣ ಮತ್ತು ಸಂಸ್ಕಾರ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ, ಸಂಸ್ಕಾರ ಕಲಿತವರು ಭ್ರಷ್ಟರಾಗುವುದಿಲ್ಲ ಎಂದರು.

ನಾಂದಣಿ ಜೈನ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ವರ್ಧಮಾನದ ಅರ್ಥ ಬೆಳವಣಿಗೆ, ಹಾಗಾಗಿ ಶಿಕ್ಷಣ ಸಂಸ್ಥೆ ಬೆಳೆಯುತ್ತಲೆ ಇರುತ್ತದೆ. ಹೆಸರಿಗೆ ತಕ್ಕಂತೆ ಸಂಸ್ಥೆ ಬೆಳವಣಿಗೆ ಕಾಣುತ್ತಿದೆ. ಸಂಸ್ಕಾರದ ಜೊತೆಗೆ ಶಿಕ್ಷಣ ಕೊಡುತ್ತ ಸಸಿಯಾಗಿದ್ದ ವರ್ಧಮಾನ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.

ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿ ಶ್ರೀಮದಭಿನವ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಪವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಕಿರುಚಿತ್ರವನ್ನು ಭಟ್ಟಾರಕ ಶ್ರೀಗಳು ಬಿಡುಗಡೆಗೊಳಿಸಿದರು. ಜಿನೈಕ್ಯರಾದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸಿದ್ದಪ್ಪ ನಾಗನೂರ, ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಮಾಡುವ ನಿರ್ಧಾರ ಮಾಡಿದಾಗ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಯ ಮೈದಾನ, ಧ್ವಜ ಕಟ್ಟೆ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ನಿಧಿ ನೀಡುವ ಮೂಲಕ ತಾವು ಕಲಿತ ಶಾಲೆಯ ಮೇಲಿನ ಪ್ರೀತಿ ತೋರಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ಶಿವಾನಂದ ದಿವಾನಮಳ, ನಿವೃತ್ತ ಡಿಡಿಪಿಐ ಬಿ.ಆರ್‌ ಗಂಗಪ್ಪನವರ, ನೇಮಣ್ಣ ದರೂರ, ಬಸಪ್ಪ ಗುಮಟಿ, ಸಂಸ್ಥೆಯ ಕಾರ್ಯಧ್ಯಕ್ಷ ಶ್ರೀಕಾಂತ್ ಅಸ್ಕಿ, ಕಾರ್ಯದರ್ಶಿ ಅನಂತ ಬಸರಿಕೋಡಿ, ಉದ್ಯಮಿ ಸುರೇಶ್ ಪಾಟೀಲ, ಅಪ್ಪಸಾಬ ನಾಡಗೌಡ ಪಾಟೀಲ, ಅರುಣ ಯಲಗುದ್ರಿ, ಬಿ.ಪಿ ಲಡಗಿ ಸೇರಿದಂತೆ ಇನ್ನಿತರರು ಇದ್ದರು. ಎ.ಸಿ ಪಾಟೀಲ ಸ್ವಾಗತಿಸಿದರು. ಎಸ್.ಎಲ್ ಕಲ್ಕೇರಿ ಮತ್ತು ವಿ.ಎನ್ ತೀರ್ಥ ನಿರೂಪಿಸಿದರು. ಬಿ.ಬಿ ತವರಟ್ಟಿ ವಂದಿಸಿದರು.

ಕೋಟ್

ಪಾಲಕರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಶಾಲೆಯಲ್ಲಿ ಶಿಕ್ಷಕರು ದೇಶದ ಮಹಾನ್ ನಾಯಕರಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿದ್ದೇನೆ ಎಂಬ ಪರಿಕಲ್ಪನೆಯಲ್ಲಿ ಪಾಠ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ಮತ್ತು ಶಿಕ್ಷಣ ನೀಡುವುದು ಪಾಲಕ ಪೋಷಕರ ಜೊತೆಗೆ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.

ಡಾ. ಮಹಾಂತ ಪ್ರಭು ಸ್ವಾಮೀಜಿ . ವಿರಕ್ತಮಠ ಸೇಗುಣಿಸಿ